ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಹೆಸರು ಕೇಳಿ ಬಂದಿದ್ದ ಭಾರತ ರಾಷ್ಟ್ರ ಸಮಿತಿ ಪಕ್ಷದ ಶಾಸಕರ ಖರೀದಿ ಪ್ರಕರಣವನ್ನು ತೆಲಂಗಾಣ ಹೈಕೋರ್ಟ್ ಸೋಮವಾರ ಸಿಬಿಐಗೆ ವಹಿಸಿದೆ.
ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ಅವರು ಆದೇಶ ಹೊರಡಿಸಿದರು. ಇದರೊಂದಿಗೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡವನ್ನೂ (ಎಸ್‌ಐಟಿ) ನ್ಯಾಯಾಲಯ ವಿಸರ್ಜಿಸಿದೆ.
ಆಡಳಿತಾರೂಢ ಬಿಆರ್‌ಎಸ್ (ಹಿಂದಿನ ಟಿಆರ್‌ಎಸ್) ಪಕ್ಷದ ಶಾಸಕರನ್ನು ಖರೀದಿ ಮಾಡುವಲ್ಲಿ ಬಿಜೆಪಿ ನಾಯಕರ ಪಾತ್ರದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿತ್ತು. ಆದರೆ ಎಸ್‌ಐಟಿ ಯಾವುದೇ ರಾಜಕೀಯ ಅಥವಾ ಕಾರ್ಯಾಂಗದ ಅಧಿಕಾರಸ್ಥರ ಎದುರು ವರದಿ ಮಾಡಬಾರದು ಬದಲಿಗೆ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಏಕಸದಸ್ಯ ಪೀಠಕ್ಕೆ ವರದಿ ಸಲ್ಲಿಸಬೇಕು ಎಂದು ನವೆಂಬರ್ 15ರಂದು ಹೈಕೋರ್ಟ್ ನಿರ್ದೇಶಿಸಿತ್ತು.
ಬಿಜೆಪಿಗೆ ಪಕ್ಷಾಂತರ ಮಾಡಲು ಆಡಳಿತಾರೂಢ ಬಿಆರ್‌ಎಸ್ ಶಾಸಕರನ್ನುಸಂಪರ್ಕಿಸಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಹಾಗೂ ಭ್ರಷ್ಟಾಚಾರ ತಡೆ ಕಾಯಿದೆಯಡಿ ಎಫ್‌ಐಆರ್ ದಾಖಲಿಸಲಾಗಿತ್ತು.
ಪ್ರಕರಣದ ಮೂವರು ಆರೋಪಿಗಳಲ್ಲಿ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮ ಮತ್ತು ನಂದ ಕುಮಾರ್ ಅವರು ಮಾಹಿತಿದಾರರನ್ನು ಭೆಟ್ಟಿಯಾಗಿ ಟಿಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸದಂತೆ ಹಾಗೂ ಟಿಆರ್‌ಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರುವಂತೆ ಮಾತುಕತೆ ನಡೆಸಿದ್ದರು. ಕೇಂದ್ರ ಸರ್ಕಾರದ ಕೆಲವು ಗುತ್ತಿಗೆ ಕಾಮಗಾರಿಗಳಲ್ಲದೆ ತನಗೆ ₹100 ಕೋಟಿ ನೀಡುವುದಾಗಿಯೂ, ಇದನ್ನು ನಿರಾಕರಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆಂದೂ ಬೆದರಿಕೆ ಹಾಕಲಾಗಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು.
ಆದರೆ ತನ್ನ ಮಾನಹಾನಿ ಮಾಡುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಮೊಯಿನಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಅದು ಹೈಕೋರ್ಟ್‌ಗೆ ಮನವಿ ಮಾಡಿತ್ತು. ಡಿಸೆಂಬರ್ 1ರಂದು, ಹೈಕೋರ್ಟ್ ಮೂವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿತ್ತು.