Telangana High Court, BJP leader BL Santhosh
Telangana High Court, BJP leader BL Santhosh  
ಸುದ್ದಿಗಳು

ಶಾಸಕರ ಖರೀದಿ: ಎಸ್ಐಟಿ ಎದುರು ಹಾಜರಾಗುವಂತೆ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಅವರಿಗೆ ಸೂಚಿಸಿದ ತೆಲಂಗಾಣ ಹೈಕೋರ್ಟ್

Bar & Bench

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಶಾಸಕರನ್ನು ಖರೀದಿ ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಏಳು ಸದಸ್ಯರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ತೆಲಂಗಾಣ ಹೈಕೋರ್ಟ್ ಶನಿವಾರ ಸೂಚಿಸಿದೆ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 41 ಎ (ಪೊಲೀಸ್ ಅಧಿಕಾರಿಯ ಮುಂದೆ ಹಾಜರಾಗುವ ಸೂಚನೆ) ಅಡಿ  ಎಸ್‌ಐಟಿ ನವೆಂಬರ್ 16ರಂದು ನೀಡಿದ ನೋಟಿಸ್‌ಗೆ ತಡೆ ಕೋರಿ ಬಿಜೆಪಿ ರಾಜ್ಯ ಘಟಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ತೆಲಂಗಾಣ ಪೊಲೀಸ್ ಎಸ್‌ಐಟಿ ಎದುರು ಹಾಜರಾಗಿ ಷರತ್ತುಗಳನ್ನು ಪಾಲಿಸುವಂತೆ ನ್ಯಾ. ಬಿ ವಿಜಯಸೇನ್ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ ನಿರ್ದೇಶಿಸಿತು. ಆದರೆ ಮುಂದಿನ ಆದೇಶದವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿತು.

" ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಎಸ್‌ಐಟಿಯು ನೋಟಿಸ್ ನೀಡಿರುವುದರಿಂದ, ಮುಂದಿನ ಆದೇಶದವರೆಗೆ (ಸಂತೋಷ್) ಅವರನ್ನು ಬಂಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದಿನಾಂಕ 16.11 ರಂದು ಸೆಕ್ಷನ್ 41 ಎ ಅಡಿ ನೀಡಲಾದ ನೋಟೀಸ್‌ನಲ್ಲಿ ಎಸ್‌ಐಟಿ ವಿಧಿಸಿದ ಷರತ್ತುಗಳನ್ನು (ಸಂತೋಷ್‌ ಅವರು) ಪಾಲಿಸತಕ್ಕದ್ದು" ಎಂದು ನ್ಯಾಯಾಲಯ ಸೂಚಿಸಿದೆ.

ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಿರುವುದರಿಂದ ಸಂತೋಷ್ ಅವರು ಬಂಧನದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೂಡ ನ್ಯಾಯಾಲಯ ಸ್ಪಷ್ಟಪಡಿಸಿದೆ.

"ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ನೀಡಿದ್ದಾಗ, ವ್ಯಕ್ತಿಯ ಬಂಧನ ಅಗತ್ಯವಿಲ್ಲ ಎನ್ನುವುದನ್ನು ನಾವು ಮತ್ತೆ ಉಲ್ಲೇಖಿಸಬೇಕಾಗಿಲ್ಲ. ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದ್ದು ಆ ಮೂಲಕ ತಮ್ಮನ್ನು ಬಂಧಿಸಬಹುದು ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿರುವಂತೆ ತೋರುತ್ತದೆ " ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಗತ್ಯವಿದ್ದಲ್ಲಿ ವಿಭಾಗೀಯ ಪೀಠದಿಂದ ಈ ಬಗ್ಗೆ ಸ್ಪಷ್ಟನೆ ಪಡೆಯಲು ಅರ್ಜಿದಾರರಿಗೆ ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ.

ಆಡಳಿತಾರೂಢ ಟಿಆರ್‌ಎಸ್‌ ಪಕ್ಷದ ಶಾಸಕರನ್ನು ಖರೀದಿ ಮಾಡುವಲ್ಲಿ ಬಿಜೆಪಿ ನಾಯಕರ ಪಾತ್ರದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ.  ಪ್ರಕರಣದ ತನಿಖೆ ನಡೆಸುತ್ತಿರುವ ಏಳು ಸದಸ್ಯರ ಎಸ್‌ಐಟಿ ಯಾವುದೇ ರಾಜಕೀಯ ಅಥವಾ ಕಾರ್ಯಾಂಗದ ಅಧಿಕಾರಸ್ಥರ ಎದುರು ವರದಿ ಮಾಡಬಾರದು ಬದಲಿಗೆ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಏಕಸದಸ್ಯ ಪೀಠಕ್ಕೆ ವರದಿ ಸಲ್ಲಿಸಬೇಕು ಎಂದು ನವೆಂಬರ್ 15 ರಂದು ಹೈಕೋರ್ಟ್ ನಿರ್ದೇಶಿಸಿತ್ತು.