ತೆಲಂಗಾಣ ರಾಷ್ಟ್ರ ಸಮತಿ (ಟಿಆರ್‌ಎಸ್) ಶಾಸಕರನ್ನು ಬಿಜೆಪಿ ಖರೀದಿಸಲು ಮುಂದಾದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಏಳು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ಯಾವುದೇ ರಾಜಕೀಯ ಅಥವಾ ಕಾರ್ಯಾಂಗದ ಅಧಿಕಾರಸ್ಥರೆದುರು ವರದಿ ಮಾಡಿಕೊಳ್ಳಬಾರದು ಎಂದು ತೆಲಂಗಾಣ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಬದಲಿಗೆ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ತನಿಖೆಯ ಮೇಲ್ವಿಚಾರಣೆ ನಡೆಸಬೇಕು. ತನಿಖಾ ವರದಿಯನ್ನು ಆ ನ್ಯಾಯಮೂರ್ತಿಗಳಿಗೇ ನೀಡಬೇಕು ಎಂದು ಎಂದು ಮುಖ್ಯ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಸಿ ವಿ ಭಾಸ್ಕರ್ ರೆಡ್ಡಿ ಅವರಿದ್ದ ಪೀಠ ನಿರ್ದೇಶಿಸಿದೆ.
ಸ್ವತಂತ್ರ ಎಸ್‌ಐಟಿ ತನಿಖೆಗೆ ನಿರ್ದೇಶಿಸುವ ಜೊತೆಗೆ ತನಿಖೆಗೆ ಅಗತ್ಯವಿರುವ ಅನುಮತಿಗಳನ್ನು ಪಡೆಯಲು ಏಕ ಸದಸ್ಯ ಪೀಠವನ್ನು ಸಂಪರ್ಕಿಸುವಂತೆ ಅದು ಕಡೆಗೆ ಸೂಚಿಸಿತು.
"2022ರ ಅಪರಾಧ ಸಂಖ್ಯೆ 455ಕ್ಕೆ ಸಂಬಂಧಿಸಿದ ಎಸ್‌ಐಟಿ ತನಿಖೆಯಲ್ಲಿ ಯಾವುದೇ ಸಂಸ್ಥೆಯ ಹಸ್ತಕ್ಷೇಪ ಇರಬಾರದು. ತನಿಖೆ ಮುಂದುವರಿಯಲು ಯಾವುದೇ ಅನುಮತಿ ಅಗತ್ಯವಿದ್ದರೆ, ಎಸ್‌ಐಟಿಯು ಏಕ ಸದಸ್ಯ ಪೀಠದ ಮುಂದೆ ಸೂಕ್ತ ಅರ್ಜಿ ಸಲ್ಲಿಸಲು ಮುಕ್ತವಾಗಿರುತ್ತದೆ" ಎಂದು ಪೀಠ ಆದೇಶಿಸಿದೆ.
ಪ್ರಕರಣ ಗಂಭೀರ ರಾಜಕೀಯ ಪರಿಣಾಮ ಬೀರಿದೆ ಎಂಬ ಅಂಶ ಪರಿಗಣಿಸಿ, ರಾಜಕೀಯ ಆರೋಪಗಳಿಂದ ಹೊರತಾದ ನ್ಯಾಯಯುತ ಮತ್ತು ವೃತ್ತಿಪರ ರೀತಿಯಲ್ಲಿ ತನಿಖೆ ನಡೆದರೆ ಸಂಬಂಧಪಟ್ಟ ಎಲ್ಲರಿಗೂ ಉತ್ತಮವಾಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೀಗಾಗಿ ತನಿಖೆಯ ಅಥವಾ ಸಂಗ್ರಹಿಸಲಾದ ಸಾಕ್ಷ್ಯಗಳ ಕುರಿತು ಮಾಹಿತಿ ಸೋರಿಕೆ ಮಾಡುವಂತಿಲ್ಲ. ತೆಲಂಗಾಣ ಸರ್ಕಾರದ ಆದೇಶದಂತೆ ಎಸ್‌ಐಟಿ ನೇತೃತ್ವ ವಹಿಸಿರುವ ಐಪಿಎಸ್ ಅಧಿಕಾರಿ ಆನಂದ್ ಅವರು ಇದನ್ನು ಸೂಕ್ಷ್ಮವಾಗಿ ಪಾಲಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆಲಿಸಲಿರುವ ನ್ಯಾ. ಬಿ ವಿಜಯಸೇನ್ ರೆಡ್ಡಿ ಅವರಿರುವ ಏಕ ಸದಸ್ಯ ಪೀಠದ ಮುಂದೆ ಎಸ್‌ಐಟಿ ತನಿಖೆಯ ಪ್ರಗತಿ ಕುರಿತು ಕಾಲಕಾಲಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ನವೆಂಬರ್ 29 ರಂದು ತನಿಖೆಯ ಪ್ರಗತಿಯ ಬಗ್ಗೆ ಏಕ ಸದಸ್ಯ ಪೀಠದೆದುರು ಮುಚ್ಚಿದ ಲಕೋಟೆಯಲ್ಲಿ ಎಸ್‌ಐಟಿ ತನ್ನ ಮೊದಲ ವರದಿ ಸಲ್ಲಿಸಬೇಕು ಎಂದು ಅದು ಆದೇಶಿಸಿದೆ.
ಟಿಆರ್‌ಎಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರ ತನಿಖೆಗೆ ತಡೆ ನೀಡಿದ್ದನ್ನು ತೆರವುಗೊಳಿಸಿದ್ದ ನ್ಯಾ. ಬಿ ವಿಜಯಸೇನ್ ರೆಡ್ಡಿ ಅವರಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ತೆಲಂಗಾಣ ರಾಜ್ಯ ಬಿಜೆಪಿ ಘಟಕ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.