Farmer Law Minister S Suresh Kumar Facebook
ಸುದ್ದಿಗಳು

ನ್ಯಾಯಮೂರ್ತಿಗಳ ಜೊತೆ ಡಿಕೆಶಿ ವೇದಿಕೆ ಹಂಚಿಕೆಗೆ ಶಾಸಕ ಸುರೇಶ್‌ ಕುಮಾರ್‌ ಆಕ್ಷೇಪ; ರಿಜಿಸ್ಟ್ರಾರ್‌ ಜನರಲ್‌ಗೆ ಪತ್ರ

ಇಂಗ್ಲೆಂಡ್‌ನ ಮುಖ್ಯ ನ್ಯಾಯಮೂರ್ತಿ ಹೇವರ್ಟ್‌ ಅವರು 1923ರಲ್ಲಿ ಎಂದು ಹೇಳಿರುವುದು ಸತ್ಯ ಅಲ್ಲವೇ? ಎಂದು ಪತ್ರದಲ್ಲಿ ಉಲ್ಲೇಖ.

Bar & Bench

ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನ್ಯಾಯಮೂರ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ವಿಚಾರವಾಗಿ ಉಂಟಾಗಿರುವ ವಿವಾದ ಶಾಸಕ ಸುರೇಶ್‌ ಕುಮಾರ್‌ ಅವರು ಈ ಕುರಿತಾಗಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಪತ್ರ ಬರೆಯುವ ಮೂಲಕ ಮತ್ತೊಂದು ಮಜಲಿಗೆ ತಲುಪಿದೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ವತಿಯಿಂದ ಮೈಸೂರಿನಲ್ಲಿ ಆಗಸ್ಟ್ 12ರಂದು ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟಾರ್‌ ಜನರಲ್‌ ಅವರಿಗೆ ಶಾಸಕ ಸುರೇಶ್‌ ಕುಮಾರ್‌ ಸೋಮವಾರ ಪತ್ರ ಬರೆದಿದ್ದಾರೆ.

ಇದೇ ವಿಚಾರವಾಗಿ ಆಗಸ್ಟ್‌ 5ರಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದಿದ್ದ ಅಂಶಗಳನ್ನೇ ಸುರೇಶ್‌ ಕುಮಾರ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಿವಕುಮಾರ್‌ ಅವರ ವಿರುದ್ಧದ ಪ್ರಕರಣಗಳು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲಿ ಬಾಕಿ ಇದ್ದು, ನ್ಯಾಯಮೂರ್ತಿಗಳ ಜೊತೆ ಅವರು ವೇದಿಕೆ ಹಂಚಿಕೊಳ್ಳುವುದರಿಂದ ಪ್ರಭಾವ ಬೀರುತ್ತಾರೆ ಎಂಬ ಭಾವನೆ ಯಾರಲ್ಲೂ ಬರಬಾರದು ಅಲ್ಲವೇ ಎಂಬ ಅಂಶವನ್ನು ಸೇರ್ಪಡೆ ಮಾಡಿದ್ದಾರೆ.

ಅಲ್ಲದೇ, 1923ರಲ್ಲಿ ಇಂಗ್ಲೆಂಡ್‌ನ ಮುಖ್ಯ ನ್ಯಾಯಮೂರ್ತಿ ಹೇವರ್ಟ್‌ ಅವರು “ನ್ಯಾಯದಾನವನ್ನು ಮಾಡುವುದಷ್ಟೇ ಅಲ್ಲ, ಅದು ತೋರುಗಾಣುವಂತೆ, ನಿಸ್ಸಂಶಯವಾಗಿ ಕಾಣುವಂತೆ ಮಾಡಬೇಕು" ಎಂದು ಹೇಳಿರುವುದು ಸತ್ಯ ಅಲ್ಲವೇ? ಎಂದು ಉಲೇಖಿಸಿದ್ದಾರೆ.