Ernakulam District Court 
ಸುದ್ದಿಗಳು

ಕೇರಳ ಶಾಸಕಿ ಅಪಘಾತ ಪ್ರಕರಣ: ಆರೋಪಿಗೆ ಕೇರಳ ನ್ಯಾಯಾಲಯ ಮಧ್ಯಂತರ ಜಾಮೀನು

ಸಂಗೀತ ಕಾರ್ಯಕ್ರಮ ಆಯೋಜಿಸುವಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಸಂಘಟಕರಲ್ಲೊಬ್ಬರಾದ ಮೃದಂಗ ವಿಷನ್ ಮಾಲೀಕ ನಿಘೋಷ್ ಕುಮಾರ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ ನ್ಯಾಯಾಲಯ.

Bar & Bench

ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿಐಪಿ ಗ್ಯಾಲರಿ ಕುಸಿದು ತೃಕ್ಕಕ್ಕರ ವಿಧಾನಸಭಾ ಕ್ಷೇತ್ರದ ಉಮಾ ಥಾಮಸ್‌ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಿಸಿದ್ದ ಮೃದಂಗ ವಿಷನ್ ಮಾಲೀಕ ನಿಘೋಷ್‌ ಕುಮಾರ್ ಅವರಿಗೆ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ [ನಿಘೋಷ್‌ ಕುಮಾರ್‌ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ವಿಚಾರಣಾ ನ್ಯಾಯಾಲಯ ನಿಘೋಷ್‌ ಕುಮಾರ್ ಅವರಿಗೆ ಜನವರಿ 7, 2025 ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಆರೋಪಿ ವಿರುದ್ಧಹೂಡಲಾದ ಸೆಕ್ಷನ್‌ಗಳಲ್ಲಿ ಬಿಎನ್‌ಎಸ್‌ ಸೆಕ್ಷನ್‌ 110ರ ಅಡಿ  ಕೊಲೆಗೆ ಸಮನಲ್ಲದ ನರಹತ್ಯೆ ಪ್ರಕರಣ ದಾಖಲಿಸಲಾಗಿತ್ತು.

ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಗುರಿಯೊಂದಿಗೆ ಕಾಲೂರಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಡಿಸೆಂಬರ್ 29, 2024ರಂದು 12,000 ಕಲಾವಿದರು ಏಕಕಾಲದಲ್ಲಿ ಭರತನಾಟ್ಯ ಪ್ರದರ್ಶಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಉಮಾ ಥಾಮಸ್‌ 15 ಅಡಿ ಎತ್ತರದ ವಿಐಪಿ ಗ್ಯಾಲರಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. . ಇದರಿಂದ ಅವರ ಮೆದುಳು, ಬೆನ್ನುಮೂಳೆಯ ಮತ್ತು ಶ್ವಾಸಕೋಶಗಳಿಗೆ ತೀವ್ರ ಗಾಯಗಳಾಗಿದ್ದವು. ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು.

ಕಾರ್ಯಕ್ರಮದ ಆಯೋಜಕರು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗಿತ್ತು.

 ಮೃದಂಗ ವಿಷನ್‌ನ ಮಾಲಕರಾದ ನಿಘೋಷ್‌ ಕುಮಾರ್ ಎಂ ಮತ್ತು ಆಸ್ಕರ್ ಕಾರ್ಯಕ್ರಮ ವ್ಯವಸ್ಥಾಪಕರಾದ ಜನೀಶ್ ಪಿಎಸ್ ಅವರು ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರಾದರೂ ಅದು ಪೊಲೀಸರೆದುರು ಶರಣಾಗುವಂತೆ ಆದೇಶಿಸಿತ್ತು.

ಅಂತೆಯೇ ಜನವರಿ 2ರಂದು ಪೊಲೀಸರೆದುರು ಶರಣಾದ ನಿಘೋಷ್‌ ಕುಮಾರ್‌ ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿತ್ತು.

ಬಂಧನ ಅವಧಿ ವಿಸ್ತರಣೆಗಾಗಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನಿಘೋಷ್‌ ಪರ ವಕೀಲರು ತಮ್ಮ ಕಕ್ಷಿದಾರನನ್ನು ಸುಳ್ಳೇ ಸಿಲುಕಿಸಲಾಗಿದ್ದು ಜಾಮೀನಿನ ಮೇಲೆ ಬಡಿಹಡೆ ಮಾಡಬೇಕು. ನಿಘೋಷ್‌ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 110ರ ಅಡಿ  ಪ್ರಕರಣ ದಾಖಲಿಸುವುದು ಸರಿಯಲ್ಲ. ತನ್ನ ಕ್ರಮಗಳಿಂದಾಗಿ ಶಾಸಕಿಗೆ ಗಾಯಗಳಾಗುತ್ತವೆ ಎಂಬ ಅರಿವು ನಿಘೋಷ್‌ ಅವರಿಗೆ ಇತ್ತು ಎನ್ನಲು ಯಾವುದೇ ಪುರಾವೆಗಳಿಲ್ಲ ಎಂದು ವಕೀಲರು ವಾದಿಸಿದ್ದರು.

ಈ ವಾದಗಳನ್ನು ಪರಿಗಣಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿಘೋಷ್‌ ಕುಮಾರ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದರು.

ಈ ಮಧ್ಯೆ ಮೃದಂಗ ನಾದಂ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮದಲ್ಲಿ ಭಾಗಿಯಾದವರಿಂದ ಹಣ ಸಂಗ್ರಹಿಸಿದ್ದು ಭರವಸೆ ನೀಡಿದ ಸೇವೆ ಒದಗಿಸಲು ವಿಫಲರಾಗಿದ್ದಾರೆ ಎಂದು ದೂರಿ ನಿಘೋಷ್‌ ಸೇರಿದಂತೆ ಆಯೋಜಕರ ವಿರುದ್ಧ ಹಣ ವಂಚನೆಯ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.