ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಲಿರುವ 2023-24ನೇ ಸಾಲಿನ ಗ್ರೂಪ್ ಎ ಮತ್ತು ಬಿ ವೃಂದದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ಪ್ರಕ್ರಿಯೆ ಅಮಾನತಿನಲ್ಲಿಟ್ಟಿರುವ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಾಧಿಕರಣವು (ಕೆಎಟಿ) ಮಾರ್ಪಾಡು ಮಾಡಿದ್ದು, ಮುಖ್ಯ ಪರೀಕ್ಷೆಗೆ ಅರ್ಜಿ ತುಂಬಲು ಮಂಗಳವಾರ ಅವಕಾಶ ಮಾಡಿಕೊಟ್ಟಿದೆ. ಆದರೆ, ಅರ್ಜಿಯು ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ಆದೇಶಿಸಿದೆ.
ಬೆಂಗಳೂರಿನ ಡಿ ಪವಿತ್ರಾ ಸೇರಿದಂತೆ ಇತರೆ 51 ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೆಎಸ್‌ಎಟಿ ನ್ಯಾಯಾಂಗ ಸದಸ್ಯ ಎಸ್ ವೈ ವಟವಟಿ ಮತ್ತು ಆಡಳಿತ ಸದಸ್ಯೆ ಡಾ. ಅಮಿತಾ ಪ್ರಸಾದ್ ಅವರ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ವೇಳೆ ಕೆಪಿಎಸ್‌ಸಿ ಪರ ವಕೀಲರು “ಪ್ರಶ್ನೆ ಪತ್ರಿಕೆ ಭಾಷಾಂತರ ಗೊಂದಲಗಳಿಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿ ಎಲ್ಲ ಪ್ರಶ್ನೆಗಳನ್ನು ಪರಿಶೀಲಿಸಿ ಕೆಲವು ಪ್ರಶ್ನೆಗಳಿಗೆ ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡಲು ಸಲಹೆ ನೀಡಿತ್ತು. ಅದರಂತೆ ಕೀ ಉತ್ತರಗಳನ್ನು ಪರಿಷ್ಕರಣೆ ಮಾಡಿ ತಪ್ಪಾಗಿದ್ದ ಪ್ರಶ್ನೆಗಳಿಗೆ ಕೃಪಾಂಕ ನೀಡಲಾಗಿದೆ” ಎಂದು ವಿವರಿಸಿದರು.
“ಅರ್ಜಿದಾರರು ಮರು ಪರೀಕ್ಷೆ ಮಾಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ. ಆದರೆ, ತಜ್ಞರ ಸಮಿತಿ ಶಿಫಾರಸ್ಸಿನಂತೆ ಕೃಪಾಂಕ ನೀಡಿದ್ದು, ಮರು ಪರಿಕ್ಷೆ ನಡೆಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಮುಖ್ಯ ಪರೀಕ್ಷೆ ನಡೆಸಲು ಆಯೋಗ ಜನವರಿ 29ರಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಅಮಾನತಿನಲ್ಲಿ ಇಟ್ಟಿರುವುದರಿಂದ ನೇಮಕ ಪ್ರಕ್ರಿಯೆ ವಿಳಂಬವಾಗಿದೆ. ಅರ್ಜಿಗೆ ಸಂಬಂಧಿಸಿದಂತೆ ವಿಸ್ತೃತ ವಾದ ಮಂಡಿಸಲು ಕೆಪಿಎಸ್‌ಸಿ ಸಿದ್ದವಿದೆ. ಅಮಾನತು ಆದೇಶ ತೆರವು ಮಾಡಬೇಕು” ಎಂದು ಮನವಿ ಮಾಡಿದರು.
ಇದನ್ನು ಪುರಸ್ಕರಿಸಿರುವ ಪೀಠವು “ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಮಾನತು ಮಾಡಿದ್ದ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದ್ದು, ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಜಿ ತುಂಬಬಹುದು. ಆದರೆ, ಅರ್ಜಿಯು ನ್ಯಾಯಾಧಿಕರಣದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ತಿಳಿಸಿ ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತು.
ನ್ಯಾಯಾಧಿಕರಣದ ಈ ಆದೇಶದಿಂದಾಗಿ ಪೂರ್ವಭಾವಿ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ 1:15ರ ಅನುಪಾತದಂತೆ ಮುಖ್ಯ ಪರೀಕ್ಷೆಗೆ ಅರ್ಜಿಯನ್ನು ಭರ್ತಿ ಮಾಡುವುದಕ್ಕೆ ಅವಕಾಶ ಸಿಕ್ಕಂತಾಗಿದೆ.
ಪ್ರಕರಣದ ಹಿನ್ನೆಲೆ: ಕಳೆದ ಆಗಸ್ಟ್ 27ರಂದು ಕೆಪಿಎಸ್‌ಸಿ 384 ಕೆಎಎಸ್ ಹುದ್ದೆಗಳ ನೇಮಕಕ್ಕೆ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. 2.10 ಲಕ್ಷ ಅರ್ಜಿ ಸಲ್ಲಿಸಿದ್ದವರ ಪೈಕಿ 1.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಪರೀಕ್ಷೆಯ ಪ್ರಶ್ನೆಪತ್ರಿಕೆ ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ಲೋಪಗಳು ಉಂಟಾದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಳಿಸುವಂತೆ ಅಭ್ಯರ್ಥಿಗಳು ಆಯೋಗವನ್ನು ಆಗ್ರಹಿಸಿದ್ದರು. ಕೊನೆಗೆ ಸರ್ಕಾರವೇ ಆಯೋಗಕ್ಕೆ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ, ಹೊಸದಾಗಿ ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು.
ಅದರಂತೆ ಆಯೋಗ ಡಿಸೆಂಬರ್ 29ಕ್ಕೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ 553 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿತ್ತು. 1.05 ಲಕ್ಷ (ಶೇ.47.7) ಅಭ್ಯರ್ಥಿಗಳು ಮರು ಪರೀಕ್ಷೆಗೆ ಹಾಜರಾಗಿದ್ದರು. ಅ ಪರೀಕ್ಷೆಯಲ್ಲೂ ಸುಮಾರು 59 ಪ್ರಶ್ನೆಗಳ ಅನುವಾದದಲ್ಲಿ ದೋಷಗಳಾಗಿದ್ದು, ಪರೀಕ್ಷೆ ರದ್ದುಗೊಳಿಸಬೇಕು ಎಂದು ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು.
ಈ ಮಧ್ಯೆ, ಕೆಪಿಎಸ್‌ಸಿ ಮೂರು ಬಾರಿ ಕೀ ಉತ್ತರಗಳನ್ನು ಬಿಡುಗಡೆ ಮಾಡಿದ್ದಲ್ಲದೆ, ಪ್ರಶ್ನೆಗಳಿಗೆ ನೀಡಿದ್ದ ಉತ್ತರದಲ್ಲಿಯೇ ಲೋಪಗಳಾಗಿದ್ದರಿಂದ ಅಭ್ಯರ್ಥಿಗಳಿಗೆ 5 ಕೃಪಾಂಕಗಳನ್ನು ನೀಡುವುದಾಗಿ ಪ್ರಕಟಿಸಿತ್ತು. ಆನಂತರ ಆಯೋಗ ಫೆಬ್ರವರಿ 10ರಂದು ಪೂರ್ವಭಾವಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿ, 1:15 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿತ್ತು.