Hasin Jahan, Mohammad Shami and Supreme Court
Hasin Jahan, Mohammad Shami and Supreme Court 
ಸುದ್ದಿಗಳು

ಕ್ರಿಕೆಟಿಗ ಶಮಿ ಕೌಟುಂಬಿಕ ಹಿಂಸಾಚಾರ ಪ್ರಕರಣ: ಒಂದು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ಆದೇಶ

Bar & Bench

ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಅವರ ಪತ್ನಿ ಹಸೀನ್ ಜಹಾನ್ ದಾಖಲಿಸಿರುವ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಒಂದು ತಿಂಗಳೊಳಗೆ ನಿರ್ಧರಿಸುವಂತೆ ಪಶ್ಚಿಮ ಬಂಗಾಳದ ಸೆಷನ್ಸ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ [ಹಸಿನ್ ಜಹಾನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಒಂದು ವೇಳೆ ಅದು ಸಾಧ್ಯವಾಗದ ಪಕ್ಷದಲ್ಲಿ, ಶಮಿ ಅವರ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ಹಿಂಪಡೆಯುವಂತೆ ಶಮಿ ಪತ್ನಿ ಸಲ್ಲಿಸಿರುವ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಈ ಆದೇಶ ಹೊರಡಿಸಿದ್ದು, ಆರಂಭದಲ್ಲಿ ನವೆಂಬರ್ 2, 2019ರವರೆಗೆ ಮಾತ್ರ ವಿಚಾರಣೆಗೆ ತಡೆ ನೀಡಲಾಗಿತ್ತು ಎನ್ನುವ ಅಂಶವನ್ನು ಪೀಠವು ಗಮನಿಸಿತು.

ಆದಾಗ್ಯೂ, ತಡೆಯಾಜ್ಞೆಯನ್ನು ನಾಲ್ಕು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಗಮನಿಸಿತು. ಹೀಗಾಗಿ, ಪ್ರಕರಣದ ವಿಚಾರಣೆ ವಿಳಂಬ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ತೆರಳಿದ್ದ ಶಮಿ ಪತ್ನಿ ಹಸೀನ್‌ ಅವರ ಮನವಿಯಲ್ಲಿ ಹುರುಳಿದೆ ಎಂದು ನ್ಯಾಯಾಲಯ ನಿರ್ಧರಿಸಿದೆ.

"… ನಾವು ಮನವಿಯಲ್ಲಿ ಹುರುಳಿರುವುದನ್ನು ಕಂಡುಕೊಂಡಿದ್ದೇವೆ. ಪ್ರಕರಣವನ್ನು ಈ ಆದೇಶ ನೀಡಿದ ಒಂದು ತಿಂಗಳೊಳಗೆ ವಿಲೇವಾರಿ ಮಾಡಲು ಸೆಷನ್ಸ್ ನ್ಯಾಯಾಧೀಶರಿಗೆ ನಿರ್ದೇಶಿಸುತ್ತಿದ್ದೇವೆ. ಇದು ಸಾಧ್ಯವಾಗದಿದ್ದರೆ ವಿಚಾರಣೆಯ ಮೇಲಿನ ತಡೆಯಾಜ್ಞೆಯನ್ನು ಹಿಂತೆಗೆದುಕೊಳ್ಳಲು ಸಲ್ಲಿಸಲಾದ ಯಾವುದೇ ಅರ್ಜಿಯನ್ನು ವಿಲೇವಾರಿ ಮಾಡಬೇಕು, ”ಎಂದು ನ್ಯಾಯಾಲಯ ಗುರುವಾರ ಆದೇಶಿಸಿದೆ.

ಶಮಿ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್‌ಗೆ 2019ರಲ್ಲಿ ಪಶ್ಚಿಮ ಬಂಗಾಳದ ಸೆಷನ್ಸ್ ನ್ಯಾಯಾಲಯ ತಡೆ ನೀಡಿತ್ತು. ಅಲ್ಲದೆ ಶಮಿ ವಿರುದ್ಧದ ಕ್ರಿಮಿನಲ್ ವಿಚಾರಣೆಗೂ ಅದು ತಡೆ ನೀಡಿತ್ತು. ಇದನ್ನು ತೆರವುಗೊಳಿಸಲು ಕೋರಿ ಹಸೀನ್‌ ಜಹಾನ್‌ ಅವರು ಕಲ್ಕತ್ತಾ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.