Supreme Court 
ಸುದ್ದಿಗಳು

ನಾಗಾಲ್ಯಾಂಡ್‌ ಹತ್ಯಾಕಾಂಡ: ಸೇನಾ ಸಿಬ್ಬಂದಿ ತನಿಖೆ ಮನವಿ ಸಂಬಂಧ ರಕ್ಷಣಾ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಆರು ವಾರಗಳಲ್ಲಿ ಈ ಸಂಬಂಧ ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

Bar & Bench

ನಾಗಾಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ 2021ರಲ್ಲಿ ನಡೆದ 14 ನಾಗರಿಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 30 ಸೇನಾ ಸಿಬ್ಬಂದಿ ವಿರುದ್ಧ ಕ್ರಿಮಿನಲ್‌ ಕ್ರಮಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರವು ನಿರಂಕುಶವಾಗಿ ನಿರಾಕರಿಸಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ದೂರಿದೆ [ನಾಗಾಲ್ಯಾಂಡ್‌ ಸರ್ಕಾರ ಮತ್ತು ರಕ್ಷಣಾ ಸಚಿವಾಲಯ ಇನ್ನಿತರರ ನಡುವಣ ಪ್ರಕರಣ].

ಆರು ವಾರಗಳಲ್ಲಿ ಈ ಸಂಬಂಧ ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಸೂಚಿಸಿದೆ.

ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 30 ಸೇನಾ ಸಿಬ್ಬಂದಿ ವಿರುದ್ಧ ರಾಜ್ಯ ಪೊಲೀಸರು ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಜುಲೈ 2022 ರಲ್ಲಿ ತಡೆ ನೀಡಿತ್ತು.

ಪ್ರಾಸಿಕ್ಯೂಷನ್‌ಗೆ ಕೇಂದ್ರ ಸರ್ಕಾರ ಅನುಮತಿ ತಿರಸ್ಕರಿಸಿದೆ ಎಂದು ಕಳೆದ ಮಾರ್ಚ್‌ನಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ತಿಳಿಸಿದ್ದರು.

ತಮ್ಮ ವಿರುದ್ಧ ನಾಗಾಲ್ಯಾಂಡ್‌ ಪೊಲೀಸರು ದಾಖಲಿಸಿರುವ ಕ್ರಿಮಿನಲ್‌ ದೂರು ಮತ್ತು ಪೂರಕ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕೆಂದು ಕೋರಿ ಆಪಾದಿತ ಸೇನಾ ಸಿಬ್ಬಂದಿ ಅರ್ಜಿ ಸಲ್ಲಿಸಿದ್ದರು.

ನಿರಾಯುಧ ನಾಗರಿಕರನ್ನು ಭಯೋತ್ಪಾದಕರು ಎಂದು ತಪ್ಪಾಗಿ ತಿಳಿದು 2021ರ ಡಿಸೆಂಬರ್ 4ರಂದು ಸೇನೆಯ ದಂಗೆ ನಿಗ್ರಹ ಪಡೆ ಗುಂಡು ಹಾರಿಸಿತ್ತು. ಸೇನಾಪಡೆಗಳ ಗುಂಡಿಗೆ ಬಲಿಯಾದವರು ಒಟಿಂಗ್‌ ಗ್ರಾಮದವರಾಗಿದ್ದು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮುಗಿಸಿ ಪಿಕಪ್‌ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಘಟನೆ ದೇಶದ ಗಮನ ಸೆಳೆದಿತ್ತು. ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ತಕ್ಷಣವೇ ರದ್ದುಪಡಿಸಬೇಕೆಂಬ ಕೂಗು ಕೇಳಿಬಂದಿತ್ತು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸೇನಾ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿತ್ತು. ಅಲ್ಲದೆ, ಘಟನೆಯ ತನಿಖೆಗಾಗಿ ನಾಗಾಲ್ಯಾಂಡ್ ಪೊಲೀಸರು ವಿಶೇಷ ತನಿಖಾ ತಂಡ  ರಚಿಸಿದ್ದರು.  ತನಿಖೆಯ ನಂತರ 30 ಸೇನಾ ಸಿಬ್ಬಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ನಂತರ ನಾಗಾಲ್ಯಾಂಡ್ ಸರ್ಕಾರವು ಆರೋಪಪಟ್ಟಿಯಲ್ಲಿ ಹೆಸರಿಸಲಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರದ ಅನುಮತಿಯನ್ನು ಕೋರಿತ್ತು. ಆದರೆ ಇದಕ್ಕೆ ಕೇಂದ್ರ ಒಪ್ಪಿರಲಿಲ್ಲ.