ನಾಗಾಲ್ಯಾಂಡ್ ನಾಗರಿಕರ ಹತ್ಯೆ: 30 ಸೇನಾ ಸಿಬ್ಬಂದಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ಕಳೆದ ವರ್ಷ ಡಿಸೆಂಬರ್ 4ರಂದು ಉಗ್ರಗಾಮಿಗಳ ಸುಳಿವು ಆಧರಿಸಿ ಸೇನೆಯ ದಂಗೆ ನಿಗ್ರಹ ಪಡೆ ನಿರಾಯುಧ ನಾಗರಿಕರನ್ನು ಭಯೋತ್ಪಾದಕರು ಎಂದು ತಪ್ಪಾಗಿ ತಿಳಿದು ಗುಂಡು ಹಾರಿಸಿತ್ತು.
Supreme Court
Supreme Court

ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ 2021ರ ಡಿಸೆಂಬರ್‌ನಲ್ಲಿ ನಡೆದ 14 ನಾಗರಿಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 30 ಸೇನಾ ಸಿಬ್ಬಂದಿ ವಿರುದ್ಧ ರಾಜ್ಯ ಪೊಲೀಸರು ದಾಖಲಿಸಿದ್ದ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.

ಘಟನೆಯ ಸಮಯದಲ್ಲಿ ಯೋಧರೊಬ್ಬರ ಸಾವನ್ನಪ್ಪಿರುವ ಬಗ್ಗೆ ಇನ್ನೂ ತನಿಖೆ ನಡೆದಿಲ್ಲ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ತಿಳಿಸಿತು.

Also Read
ನಾಗಾಲ್ಯಾಂಡ್‌: ಇನ್ನೂ 6 ತಿಂಗಳು ಎಎಫ್ಎಸ್‌ಪಿಎ ಕಾಯಿದೆ ಅನ್ವಯ

ನ್ಯಾಯಾಲಯವು ಎರಡು ಮನವಿಗಳನ್ನು ಆಲಿಸುತ್ತಿತ್ತು, ಅದರಲ್ಲಿ ಒಂದು ನಾಗಾಲ್ಯಾಂಡ್ ಪೋಲೀಸರು ಪ್ರಕರಣ ದಾಖಲಿಸಿದ ಸೇನಾ ಅಧಿಕಾರಿಗಳಲ್ಲಿ ಒಬ್ಬರಾದ ಮೇಜರ್ ಅಂಕುಶ್ ಗುಪ್ತಾ ಅವರ ಪತ್ನಿ ಅಂಜಲಿ ಗುಪ್ತಾ ಅವರು ಸಲ್ಲಿಸಿದ್ದ ಮನವಿಯಾಗಿತ್ತು.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಸೇನಾಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಮುಕ್ತ ಮತ್ತು ನಿಸ್ಪಕ್ಷಪಾತವಾದ ಕೆಲಸ ಮಾಡಬೇಕಿದ್ದ ಎಸ್‌ಐಟಿ, ಸಾರ್ವಜನಿಕ ಆಕ್ರೋಶವನ್ನು ಕಡಿಮೆ ಮಾಡುವ ಸಲುವಾಗಿ ಆಯ್ದ ಪುರಾವೆಗಳನ್ನಷ್ಟೇ ಪರಿಗಣಿಸುವ ಮೂಲಕ ಸಂಪೂರ್ಣ ಮನಸೋಇಚ್ಛೆಯಿಂದ, ಏಕಪಕ್ಷೀಯವಾಗಿ ಹಾಗೂ ಕಾನೂನುಬಾಹಿರ ರೀತಿಯಲ್ಲಿ ವರ್ತಿಸಿದೆ ಎಂದು ಮನವಿಯಲ್ಲಿ ವಾದಿಸಲಾಗಿತ್ತು. ನಾಗರಿಕರ ಹತ್ಯೆಯ ಹೊಣೆಗಾರಿಕೆಯಿಂದ ಸೈನಿಕರಿಗೆ ರಕ್ಷಣೆ ನೀಡುವ ವಿಷೇಷಾಧಿಕಾರವಿದ್ದರೂ ಸಹ ಅವರ ವಿರುದ್ಧ ಅಪರಾಧ ಸಂಹಿತೆಯಡಿ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Also Read
ಪ್ರತಿಕ್ರಿಯೆ ದಾಖಲಿಸಲು ನಾಗಾಲ್ಯಾಂಡ್‌ ಸರ್ಕಾರ ವಿಫಲ; ಶ್ವಾನ ಮಾಂಸ ನಿಷೇಧಕ್ಕೆ ತಡೆ ನೀಡಿದ ಗುವಾಹಾಟಿ ಹೈಕೋರ್ಟ್‌

ಕಳೆದ ವರ್ಷ ಡಿಸೆಂಬರ್ 4ರಂದು ಉಗ್ರಗಾಮಿಗಳ ಸುಳಿವು ಆಧರಿಸಿ, ನಿರಾಯುಧ ನಾಗರಿಕರನ್ನು ಭಯೋತ್ಪಾದಕರು ಎಂದು ತಪ್ಪಾಗಿ ತಿಳಿದು ಸೇನೆಯ ದಂಗೆ ನಿಗ್ರಹ ಪಡೆ ಗುಂಡು ಹಾರಿಸಿತ್ತು. ಸೇನಾಪಡೆಗಳ ಗುಂಡಿಗೆ ಬಲಿಯಾದವರಲ್ಲಿ ಒಟಿಂಗ್‌ ಗ್ರಾಮದವರಾಗಿದ್ದು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮುಗಿಸಿ ಪಿಕಪ್‌ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಘಟನೆ ದೇಶದ ಗಮನ ಸೆಳೆದಿತ್ತು. ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ತಕ್ಷಣವೇ ರದ್ದುಪಡಿಸಬೇಕೆಂಬ ಕೂಗು ಕೇಳಿಬಂದಿತ್ತು.

Related Stories

No stories found.
Kannada Bar & Bench
kannada.barandbench.com