ಸುದ್ದಿಗಳು

ಅಕ್ರಮ ಹಣ ವರ್ಗಾವಣೆ: ಉದ್ಯಮಿ ಸುಶೀಲ್ ಮಂತ್ರಿ ಅವರನ್ನು 10 ದಿನ ಇ ಡಿ ವಶಕ್ಕೆ ನೀಡಿದ ಪಿಎಂಎಲ್ಎ ನ್ಯಾಯಾಲಯ

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮ ʼಮಂತ್ರಿ ಡೆವಲಪರ್ಸ್‌ ಪ್ರೈ ಲಿಮಿಟೆಡ್‌ʼನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಸುಶೀಲ್ ಪಿ ಮಂತ್ರಿ ಅವರನ್ನು ಪಿಎಂಎಲ್‌ಎ ವಿಶೇಷ ನ್ಯಾಯಾಲಯವೊಂದು 10 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ ಡಿ) ವಶಕ್ಕೆ ನೀಡಿದೆ.

ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸುಶೀಲ್‌ ಅವರಿಗೆ ಸೂಚಿಸಿದ್ದ ಇ ಡಿ ಶನಿವಾರವೂ ವಿಚಾರಣೆ ಮುಂದುವರೆಸಿತ್ತು. ಸೂಕ್ತ ಉತ್ತರ ದೊರೆಯದ ಕಾರಣ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಂಪೆನಿ, ಅದರ ನಿರ್ದೇಶಕರು ಹಾಗೂ ವಿವಿಧ ನೌಕರರ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಎರಡು ವರ್ಷಗಳ ಹಿಂದೆ ದಾಖಲಾಗಿದ್ದ ಎಫ್‌ಐಆರ್‌ ಆಧರಿಸಿ ಕಳೆದ ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು. ಸಾವಿರಾರು ಮಂದಿಯಿಂದ ಮುಂಗಡವಾಗಿ ₹1,350 ಕೋಟಿ ಹಣ ಪಡೆಯಲಾಗಿತ್ತು. ಹತ್ತು ವರ್ಷ ಕಳೆದರೂ ಖರೀದಿದಾರರಿಗೆ ಫ್ಲಾಟ್‌ಗಳನ್ನು ಹಸ್ತಾಂತರಿಸಿರಲಿಲ್ಲ ಎಂಬುದೂ ಸೇರಿದಂತೆ ಹಣಕಾಸು ಸಂಸ್ಥೆಗಳಿಗೆ ಮೋಸ ಮಾಡಿದ ಹಾಗೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಅವರ ಮೇಲಿತ್ತು. ಹಣವನ್ನು ಯೋಜನೆಗಳಿಗಾಗಿ ಬಳಸದೆ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಖಾಸಗಿ ಉದ್ದೇಶಗಳಿಗೆ ಬಳಸಿರುವುದು ಇ ಡಿ ಗಮನಕ್ಕೆ ಬಂದಿತ್ತು.

ಗ್ರಾಹಕರಿಗೆ ವಂಚಿಸಿರುವುದು ಮಾತ್ರವಲ್ಲದೆ ರಿಯಲ್‌ ಎಸ್ಟೇಟ್‌ ಉದ್ಯಮದ ಹೆಸರಿನಲ್ಲಿ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದಿದ್ದ ₹5,000 ಕೋಟಿ ಮೊತ್ತದ ಸಾಲ ಹಿಂತಿರುಗಿಸಿರಲಿಲ್ಲ. ಇದರಲ್ಲಿ ₹1,000 ಕೋಟಿಯಷ್ಟು ಹಣ ಅನುತ್ಪಾದಕ ಆಸ್ತಿ ವರ್ಗಕ್ಕೆ ಬರುತ್ತದೆ ಎಂಬುದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿತ್ತು.