ಸುದ್ದಿಗಳು

ಮಂಗಗಳ ಮಾರಣಹೋಮ ಪ್ರಕರಣ: ವಿಶೇಷ ತನಿಖಾ ತಂಡ ರಚಿಸಿರುವ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ

ಪ್ರಕರಣದ ತನಿಖೆ ನಡೆಸಿರುವ ಎಸ್‌ಐಟಿ ಏಳು ಮಂದಿ ಆರೋಪಿಗಳ ಬಂಧಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಸರ್ಕಾರ; ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೆ.

Bar & Bench

ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ವ್ಯಾಪ್ತಿಯ ಚೌಡನಹಳ್ಳಿ ಬಳಿಯಲ್ಲಿ ಮಂಗಗಳ ಮಾರಣಹೋಮ ನಡೆಸಿ ಮೂಟೆಯಲ್ಲಿ ಕಟ್ಟಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿರುವುದಾಗಿ ಕರ್ನಾಟಕ ಸರ್ಕಾರವು ಬುಧವಾರ ರಾಜ್ಯ ಹೈಕೋರ್ಟ್‌ಗೆ ತಿಳಿಸಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ನೇತೃತ್ವದಲ್ಲಿ ರಚಿಸಲಾಗಿರುವ ಎಸ್‌ಐಟಿಯು ಪ್ರಕರಣದ ಸಂಬಂಧ ಇದಾಗಲೇ ಏಳು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿಯೂ ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಪ್ರಕರಣದ ಕುರಿತಾದ ವರದಿಯನ್ನು ಹಾಸನದ ಜಿಲ್ಲಾಧಿಕಾರಿಯವರು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಸಿದರು.ಮಂಗಗಳ ಸಾವಿಗೆ ವಿಷಪ್ರಾಷನ ಕಾರಣವಿರಬಹುದು ಎಂಬುದಾಗಿ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೇ ಕೈಸೇರಬೇಕಿದೆ ಎಂದು ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ಪೀಠದ ಗಮನಕ್ಕೆ ತಂದರು. ಪ್ರಕರಣದಲ್ಲಿನ ಆರೋಪಿಗಳ ವಿರುದ್ಧ ಹೂಡಬೇಕಿರುವ ಕಾಯಿದೆಗಳ ನಿರ್ದಿಷ್ಟ ನಿಬಂಧನೆಗಳ ಕುರಿತಾಗಿ ಹಾಗೂ ಮತ್ತಿತರ ಕಾನೂನು ವಿಚಾರಗಳ ಬಗ್ಗೆ ಗಮನಹರಿಸಬೇಕಿರುವುದನ್ನು ಪೀಠವು ಗಮನಿಸಿತು. ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಜಿಲ್ಲಾಧಿಕಾರಿಯವರ ವರದಿಯ ಪ್ರಮುಖ ಅಂಶಗಳು:

ಮಂಗಗಳು ಸಮೀಪದ ಹಳ್ಳಿಗಳಲ್ಲಿ ಬೆಳೆನಾಶವನ್ನು ಉಂಟು ಮಾಡುತ್ತಿದ್ದ ಕಾರಣಕ್ಕೆ ಕೆಲ ಹಳ್ಳಿಗರೇ ಅವುಗಳನ್ನು ಹಿಡಿಸಲು ಮಂಗಗಳನ್ನು ಹಿಡಿಯುವವರನ್ನು ಒಪ್ಪಿಸಿರುವ ಸಾಧ್ಯತೆಯ ಬಗ್ಗೆ ಜಿಲ್ಲಾಧಿಕಾರಿಯವರು ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಮಂಗಗಳ ಸಾವು ಅವುಗಳನ್ನು ಸಾಗಿಸುವ ಸಂದರ್ಭದಲ್ಲಿ ಉಂಟಾಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.