ಬೇಲೂರಿನಲ್ಲಿ ಮಂಗಗಳ ಮಾರಣಹೋಮ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಕರ್ನಾಟಕ ಹೈಕೋರ್ಟ್‌

ಪ್ರಾಣಿಗಳ ಬದುಕುವ ಹಕ್ಕು ಮಾತ್ರವೇ ಅಲ್ಲದೆ ಪ್ರಾಣಿಗಳ ಮೇಲಿನ ಹಿಂಸೆಯ ತಡೆ ಕಾಯಿದೆ 1960ರ ನಿಬಂಧನೆ ಅದರಲ್ಲೂ ಸೆಕ್ಷನ್‌ 3 ಮತ್ತು 11 ಅನ್ನು ಪ್ರಕರಣದಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಬೇಲೂರಿನಲ್ಲಿ ಮಂಗಗಳ ಮಾರಣಹೋಮ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಕರ್ನಾಟಕ ಹೈಕೋರ್ಟ್‌

ಹಾಸನದ ಬೇಲೂರು ತಾಲ್ಲೂಕಿನಲ್ಲಿ ಮಂಗಗಳ ಮಾರಣ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹಾಸನ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸಾರ್ವಜನಿಕ ಹಿತಾಸಕ್ತಿ ಮನವಿಯಲ್ಲಿ ಪ್ರತಿವಾದಿಗಳನ್ನಾಗಿಸುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ಆದೇಶಿಸಿದೆ.

“ಮಾಧ್ಯಮ ವರದಿಗಳು ಆತಂಕ ಮೂಡಿಸುವಂತಿವೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ರಸ್ತೆ ಬದಿಯಲ್ಲಿ ಬುಧವಾರ ರಾತ್ರಿ ಹಲವಾರು ಮಂಗಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ. ಸಾವನ್ನಪ್ಪಿದ ಮಂಗಗಳ ಜೊತೆಗೆ ಜೀವಂತವಾಗಿದ್ದ 15 ಮಂಗಗಳನ್ನು ಚೀಲದಲ್ಲಿ ತುಂಬಲಾಗಿತ್ತು. ಸುಪ್ರೀಂ ಕೋರ್ಟ್‌ ಕಾನೂನು ರೂಪಿಸಿರುವ ಹಿನ್ನೆಲೆಯಲ್ಲಿ ಸದರಿ ಪ್ರಕರಣವನ್ನು ಈ ನ್ಯಾಯಾಲಯ ಪರಿಗಣಿಸುವುದು ಅಗತ್ಯವಾಗಿದೆ. ಪ್ರಾಣಿಗಳಿಗೆ ಇರುವ ಸೀಮಿತ ಬದುಕುವ ಹಕ್ಕಿನ ಕುರಿತು ಸುಪ್ರೀಂ ಕೋರ್ಟ್‌ ನಿರ್ಧಾರದಲ್ಲಿ ಉಲ್ಲೇಖಿಸಲಾಗಿದೆ” ಎಂದು ಪೀಠ ಹೇಳಿದೆ.

ಪ್ರಾಣಿಗಳ ಬದುಕುವ ಹಕ್ಕು ಮಾತ್ರವೇ ಅಲ್ಲದೆ ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯಿದೆ 1960ರ ನಿಬಂಧನೆ ಅದರಲ್ಲೂ ಸೆಕ್ಷನ್‌ 3 ಮತ್ತು 11 ಅನ್ನು ಸ್ಪಷ್ಟವಾಗಿ ಪ್ರಕರಣದಲ್ಲಿ ಉಲ್ಲಂಘಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. “ಮಂಗಗಳ ಮಾರಣ ಹೋಮಕ್ಕೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ರಿಟ್‌ ಮನವಿ ಸಲ್ಲಿಸುವಂತೆ ನಾವು ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶಿಸಿದ್ದೇವೆ. ಇಷ್ಟು ಮಾತ್ರವಲ್ಲದೇ ಮುಂದೆ ಇಂಥ ಅಮಾನವೀಯ ಮತ್ತು ಆಘಾತಕಾರಿ ಘಟನೆಗಳು ನಡೆಯದಂತೆ ತಡೆಯಲು ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವಿದೆ” ಎಂದು ಪೀಠ ಹೇಳಿದೆ.

Also Read
ಲೋಕಾಯುಕ್ತರ ವರದಿ: ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ರಾಜ್ಯ ಸರ್ಕಾರದ ಮನವಿಗೆ ಕರ್ನಾಟಕ ಹೈಕೋರ್ಟ್‌ ಅಸಮ್ಮತಿ

ಘಟನೆಯ ವಿವರ ಮತ್ತು ಇದುವರೆಗೆ ಸಂಬಂಧಿತರ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮಾಹಿತಿ ರವಾನಿಸಿ, ಆಗಸ್ಟ್‌ 4ರ ಒಳಗೆ ವರದಿ ಸಲ್ಲಿಸಬೇಕು ಎಂದು ಹೆಚ್ಚುವರಿ ಸರ್ಕಾರಿ ವಕೀಲರಿಗೆ ನ್ಯಾಯಾಲಯ ಆದೇಶಿಸಿದೆ.

ಸಾವನ್ನಪ್ಪಿದ 38 ಮಂಗಗಳು ಮತ್ತು ಬದುಕಲು ಹರಸಾಹಸ ಪಡುತ್ತಿದ್ದ ಚೀಲದಲ್ಲಿ ತುಂಬಲಾಗಿದ್ದ 15 ಮಂಗಳು ಬೇಲೂರು ರಸ್ತೆ ಬದಿಯಲ್ಲಿ ಬುಧವಾರ ಪತ್ತೆಯಾಗಿದ್ದವು. ವಿಷ ಹಾಕಿ ಮಂಗಗಳನ್ನು ಕೊಲ್ಲಲಾಗಿದೆ ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದರು.

Related Stories

No stories found.
Kannada Bar & Bench
kannada.barandbench.com