Prajwal Revanna 
ಸುದ್ದಿಗಳು

ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್‌ ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

Bar & Bench

ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಠಾಣೆಯಲ್ಲಿ ದಾಖಲಾಗಿರುವ ಮೊದಲನೇ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಬುಧವಾರ ಜಾಮೀನು ನಿರಾಕರಿಸಿದೆ.

ಪ್ರಜ್ವಲ್‌ ರೇವಣ್ಣರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಮಂಗಳವಾರ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ನ್ಯಾಯಾಧೀಶ ಸಂತೋಷ್‌ ಗಜಾನನ್‌ ಭಟ್‌ ಇಂದು ಪ್ರಕಟಿಸಿದರು.

ಪ್ರಜ್ವಲ್‌ ರೇವಣ್ಣ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಲೋಕಸಭಾ ಚುನಾವಣೆಯಾದ ಬೆನ್ನಿಗೇ ಏಪ್ರಿಲ್‌ 28ರಂದು ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ ಮತ್ತು ಪ್ರಜ್ವಲ್‌ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದರು. ಇದನ್ನು ಆಧರಿಸಿ ಆರೋಪಿಗಳಿಬ್ಬರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354(ಎ), 354(ಡಿ), 506, 509 ಅಡಿ ಎಫ್‌ಐಆರ್‌ ದಾಖಲಾಗಿತ್ತು. ಈ ನಡುವೆ, ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಿದ್ದರು. ರಾಜ್ಯ ಸರ್ಕಾರವು ಹಾಸನದ ಅತ್ಯಾಚಾರ/ಲೈಂಗಿಕ ಹಗಣರದ ವಿಚಾರಣೆಗಾಗಿ ವಿಶೇಷ ತನಿಖಾ ದಳ ರಚಿಸಿತ್ತು.

ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ರೇವಣ್ಣಗೆ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದನ್ನು ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಈ ಮಧ್ಯೆ, ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದ ಎಸ್‌ಐಟಿಯು ಪ್ರಜ್ವಲ್‌ ವಿರುದ್ಧ ಐಪಿಸಿ ಸೆಕ್ಷನ್‌ 376 (ಅತ್ಯಾಚಾರ) ಸೇರ್ಪಡೆ ಮಾಡಿದೆ.

ಹಾಸನ ಅತ್ಯಾಚಾರ/ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ವಿರುದ್ಧ ಇದುವರೆಗೆ ನಾಲ್ಕು ಎಫ್‌ಐಆರ್‌ ದಾಖಲಾಗಿವೆ. ಮೊದಲ ಮೂರು ಎಫ್‌ಐಆರ್‌ಗಳಲ್ಲಿ ಅತ್ಯಾಚಾರ ಆರೋಪ ಮಾಡಲಾಗಿದೆ. ನಾಲ್ಕನೇ ಎಫ್‌ಐಆರ್‌ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಜೂನ್‌ 29ರವರೆಗೆ ಪ್ರಜ್ವಲ್‌ರನ್ನು ವಿಚಾರಣೆಗಾಗಿ ಎಸ್‌ಐಟಿ ವಶಕ್ಕೆ ನೀಡಿದೆ.

ಪ್ರಜ್ವಲ್‌ ಪರವಾಗಿ ವಕೀಲ ಜಿ ಅರುಣ್‌, ರಾಜ್ಯ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ವಾದಿಸಿದರು.