ಲೈಂಗಿಕ ಕಿರುಕುಳ ಪ್ರಕರಣ: ಜೂನ್‌ 29ರವರೆಗೆ ಎಸ್‌ಐಟಿ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ

ಆರೋಪಿಯ ಧ್ವನಿ ಪರೀಕ್ಷೆ ನಡೆಸಬೇಕಿದೆ. ಮಹಜರು ಮಾಡಬೇಕಿದೆ ಹಾಗೂ ವಿಚಾರಣೆಯಲ್ಲಿ ಹಲವು ಸಾಕ್ಷಿಗಳನ್ನು ಆರೋಪಿಗೆ ಮುಖಾಮುಖಿಯಾಗಿಸಿ ಹೇಳಿಕೆ ದಾಖಲು ಮಾಡಿಕೊಳ್ಳಬೇಕಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಪ್ರಾಸಿಕ್ಯೂಷನ್.‌
ಲೈಂಗಿಕ ಕಿರುಕುಳ ಪ್ರಕರಣ: ಜೂನ್‌ 29ರವರೆಗೆ ಎಸ್‌ಐಟಿ ಕಸ್ಟಡಿಗೆ ಪ್ರಜ್ವಲ್‌ ರೇವಣ್ಣ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜೂನ್ 29ರವರೆಗೆ ಮತ್ತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಎಸ್‌ಐಟಿ ಕಸ್ಟಡಿಗೆ ನೀಡಿದೆ. ಪ್ರಜ್ವಲ್‌ ವಿರುದ್ಧ ದಾಖಲಾಗಿರುವ ನಾಲ್ಕನೇ ಪ್ರಕರಣ ಇದಾಗಿದೆ.

ನಿನ್ನೆ ಪ್ರಜ್ವಲ್‌ರನ್ನು ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇಂದು ಆರೋಪಿ ಪ್ರಜ್ವಲ್‌ರನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್ ಅವರು “ಆರೋಪಿಯ ಧ್ವನಿ ಪರೀಕ್ಷೆ ನಡೆಸಬೇಕಿದೆ. ಮಹಜರು ಮಾಡಬೇಕಿದೆ ಹಾಗೂ ವಿಚಾರಣೆಯಲ್ಲಿ ಹಲವು ಸಾಕ್ಷಿಗಳನ್ನು ಆರೋಪಿಗೆ ಮುಖಾಮುಖಿಯಾಗಿಸಿ ಹೇಳಿಕೆ ದಾಖಲು ಮಾಡಿಕೊಳ್ಳಬೇಕಾಗಿದೆ. ಹೀಗಾಗಿ, ಏಳು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಬೇಕು" ಎಂದು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ನಾಲ್ಕು ದಿನ ಪೊಲೀಸರ ಕಸ್ಟಡಿಗೆ ನೀಡಿತು.

Also Read
ಅತ್ಯಾಚಾರ ಪ್ರಕರಣ: ಪ್ರಜ್ವಲ್‌ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ

ವಿದೇಶದಿಂದ ಮರಳುತ್ತಲೇ ಮೇ 21ರಂದು ಬಂಧಿತರಾಗಿದ್ದ ಪ್ರಜ್ವಲ್‌ರನ್ನು ಮೇ 31ರಿಂದ ಜೂನ್‌ 10ರವರೆಗೆ ಎಸ್‌ಐಟಿ ವಶಕ್ಕೆ ನೀಡಲಾಗಿತ್ತು. ಆನಂತರ ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಜೂನ್‌ 13ರಿಂದ 18ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಲಾಗಿತ್ತು. ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಜೂನ್‌ 24ರವರೆಗೆ ಎಸ್‌ಐಟಿ ವಶಕ್ಕೆ ನೀಡಲಾಗಿತ್ತು. 

Kannada Bar & Bench
kannada.barandbench.com