Pregnant woman and supreme court
Pregnant woman and supreme court A1
ಸುದ್ದಿಗಳು

ಎಂಟಿಪಿ ಕಾಯಿದೆ: 20 ವಾರ ಮೀರಿದ ಗರ್ಭ ಧರಿಸಿರುವ ಅವಿವಾಹಿತೆಗೆ ಗರ್ಭಪಾತದ ಹಕ್ಕು ನಿರಾಕರಿಸಲಾಗದು ಎಂದ ಸುಪ್ರೀಂ

Bar & Bench

ಮಹತ್ವದ ತೀರ್ಪೊಂದರಲ್ಲಿ, 20 ವಾರಗಳ ನಂತರವೂ 24 ವಾರಗಳವರೆಗೆ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿಸುವ ವೈದ್ಯಕೀಯ ಗರ್ಭಪಾತ ಕಾಯಿದೆಯ (ಎಂಟಿಪಿ ಕಾಯಿದೆ) ನಿಬಂಧನೆಗಳನ್ನು ಮಹಿಳೆ ಅವಿವಾಹಿತಳು ಎಂಬ ಕಾರಣದಿಂದಾಗಿ ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ [ಎಕ್ಸ್‌ (ಅನಾಮಿಕ ವ್ಯಕ್ತಿ) ಮತ್ತು ದೆಹಲಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತಿತರರ ನಡುವಣ ಪ್ರಕರಣ].

ಎಂಟಿಪಿ ನಿಯಮಾವಳಿ 3 ಬಿ(ಸಿ) ಅನ್ನು ನಿರ್ಬಂಧಿತ ರೀತಿಯಲ್ಲಿ ವ್ಯಾಖ್ಯಾನಿಸಲಾಗುವುದಿಲ್ಲ ಹೀಗಾಗಿ 20 ವಾರಗಳಿಗಿಂತ ಹೆಚ್ಚಿನ ಗರ್ಭ ಧರಿಸಿರುವ ಅವಿವಾಹಿತೆಗೆ ಗರ್ಭಪಾತದ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎ ಎಸ್ ಬೋಪಣ್ಣ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತಿಳಿಸಿತು.

"ವಿವಾಹಿತ ಮಹಿಳೆಗೆ ನಿಯಮ 3B (ಸಿ) ಅನ್ವಯವಾಗುತ್ತದೆ ಎಂದು ಅರ್ಥೈಸಿದರೆ, ಅವಿವಾಹಿತರು ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಅರ್ಥ ಬರುತ್ತದೆ. ಹೀಗಾಗಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯ ನಡುವಿನ ಕೃತಕ ವ್ಯತ್ಯಾಸವನ್ನು ಉಳಿಸಿಕೊಳ್ಳುವಂತಿಲ್ಲ," ಎಂದು ನ್ಯಾಯಾಲಯ ಹೇಳಿದೆ.

ಈ ಮೂಲಕ ಸಮ್ಮತಿಯ ಲೈಂಗಿಕ ಸಂಬಂಧದಿಂದ ಗರ್ಭಿಣಿಯಾಗುವ ಅವಿವಾಹಿತ ಮಹಿಳೆಯರು ಸಹ 24 ವಾರಗಳವರೆಗೆ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅರ್ಹರಾಗಿರುತ್ತಾರೆ ಎಂದು ಪೀಠ ಹೇಳಿದೆ.

ಎಂಟಿಪಿ ನಿಯಮದ ಪ್ರಕಾರ, ಅತ್ಯಾಚಾರ ಸಂತ್ರಸ್ತರು, ಅಪ್ರಾಪ್ತ ವಯಸ್ಕರು, ಗರ್ಭಾವಸ್ಥೆಯಲ್ಲಿ ವೈವಾಹಿಕ ಸ್ಥಿತಿ ಬದಲಾದ ಮಹಿಳೆಯರು, ಮಾನಸಿಕ ಅಸ್ವಸ್ಥೆಯರು ಅಥವಾ ಭ್ರೂಣದ ವಿರೂಪತೆ ಇರುವ ಮಹಿಳೆಯರಿಗೆ ಮಾತ್ರ 24 ವಾರಗಳವರೆಗೆ ಗರ್ಭ ಅಂತ್ಯಗೊಳಿಸಲು ಅನುಮತಿಸಲಾಗಿತ್ತು. ಅವಿವಾಹಿತ ಮಹಿಳೆಯರಿಗೆ ಈ ಅವಕಾಶ ಕೇವಲ 20 ವಾರಗಳವರೆಗೆ ಮಾತ್ರ ಇತ್ತು.

ಆದರೆ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವೆ ಭೇದ ಕಲ್ಪಿಸುವುದು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ. ವೈವಾಹಿಕ ಸ್ಥಿತಿಯ ಅಂತಹ ಸೀಮಿತ ಆಧರದ ಮೇಲೆ ಕಾನೂನು  ಕೃತಕ ವರ್ಗೀಕರಣ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.