ಮುಡಾದಲ್ಲಿ ಮುಖ್ಯಮಂತ್ರಿ ಪತ್ನಿ ಬಿ ಎಂ ಪಾರ್ವತಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶನಿವಾರ ಅನುಮತಿಸಿದ್ದಾರೆ.
“ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಭ್ರಷ್ಟಾಚಾರ ನಿರೋಧ ಕಾಯಿದೆ ಸೆಕ್ಷನ್ 17 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 218ರ ಅಡಿ ಸಕ್ಷಮ ಪ್ರಾಧಿಕಾರದ ನಿರ್ಧಾರವನ್ನು ರಾಜ್ಯಪಾಲರ ನಿರ್ದೇಶನದಂತೆ ಲಗತ್ತಿಸಿದ್ದೇನೆ” ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಕಳುಹಿಸಿದ್ದಾರೆ.
ಈ ಬೆಳವಣಿಗೆಯ ಮಧ್ಯಯೇ ಇಂದು ಸಂಜೆ 5 ಗಂಟೆಗೆ ರಾಜ್ಯ ಸರ್ಕಾರದ ವಿಶೇಷ ಸಂಪುಟ ಸಭೆ ನಡೆಯಲಿದೆ.
ಸಾಮಾಜಿಕ ಕಾರ್ಯಕರ್ತರಾದ ಟಿ ಜೆ ಅಬ್ರಹಾಂ, ಮೈಸೂರಿನ ಸ್ನೇಹಮಯಿ ಕೃಷ್ಣ ಮತ್ತು ಮತ್ತು ಬೆಂಗಳೂರಿನ ಪ್ರದೀಪ್ ಕುಮಾರ್ ಎಸ್ ಪಿ ಅವರು ಅಭಿಯೋಜನಾ ಮಂಜೂರಾತಿ ಕೋರಿದ್ದರು.
ಅಬ್ರಹಾಂ ಅವರು ಜುಲೈ 26ರಂದು ಅಭಿಯೋಜನಾ ಮಂಜೂರಾತಿ ಕೋರಿದ್ದರು. ಅಂದು ಸಂಜೆಯೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಸ್ತೃತವಾದ ಉತ್ತರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಆದರೆ, ಅಂದೇ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು.
ಈ ಸಂಬಂಧ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ ನಡೆಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಿರುವ ಶೋಕಾಸ್ ನೋಟಿಸ್ ಅನ್ನು ಹಿಂಪಡೆಯ ಬೇಕು ಎಂಬ ಸಲಹೆ ನೀಡಿತ್ತು. ಇದ್ಯಾವುದನ್ನೂ ಪರಿಗಣಿಸದ ರಾಜ್ಯಪಾಲರು ಇಂದು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದ್ದಾರೆ.