ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸುವಂತೆ ಕೋರಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
ಮೈಸೂರು ಜಿಲ್ಲೆಯ ಕೆಸರೆ ಗ್ರಾಮದಲ್ಲಿರುವ ಅದಾಗಲೇ ಮುಡಾ ಅಭಿವೃದ್ಧಿ ಪಡಿಸಿ, ನಿವೇಶನಗಳನ್ನು ಹಂಚಿಕೆ ಮಾಡಿದ್ದ ಆಕ್ಷೇಪಾರ್ಹವಾಗಿರುವ ಸರ್ವೇ ನಂಬರ್ 464ರಲ್ಲಿನ 3.16 ಎಕರೆ ಜಮೀನನ್ನು ಕೃಷಿ ಜಮೀನು ಎಂದು ತಪ್ಪಾಗಿ ದಾಖಲೆಗಳಲ್ಲಿ ತೋರಿಸುವ ಮೂಲಕ 2004ರ ಮೇ 27ರಂದು ಕಾನೂನುಬಾಹಿರವಾಗಿ ಜೆ ದೇವರಾಜು ಮತ್ತು ಇತರರು ಸಿದ್ದರಾಮಯ್ಯ ಅವರ ಭಾವ ಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ 5.95 ಲಕ್ಷ ರೂಪಾಯಿ ಮಾರಾಟ ಮಾಡಿರುವ ಕ್ರಯಪತ್ರವನ್ನು ಸೃಷ್ಟಿಸಲಾಗಿದೆ ಎಂದು ಅಬ್ರಹಾಂ ಆಪಾದಿಸಿದ್ದಾರೆ. ಆಕ್ಷೇಪಾರ್ಹವಾದ ಭೂಮಿಯನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ಪಾರ್ವತಿ ಅವರಿಗೆ 2010ರಲ್ಲಿ ದಾನ ಮಾಡಿದ್ದು, ಇದನ್ನು ಮುಡಾ ವಶಪಡಿಸಿಕೊಂಡು ಬಡಾವಣೆ ರೂಪಿಸಿ, ನಿವೇಶನ ಹಂಚಿದೆ. ಇದಕ್ಕೆ ಬದಲಿಯಾಗಿ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಿರುವುದು ವಿವಾದದ ಕೇಂದ್ರ ಬಿಂದುವಾಗಿದೆ.
ಆದರೆ, ಇದಕ್ಕೂ ಮುನ್ನ ದೇವರಾಜು ಮತ್ತು ಅವರ ಮತ್ತೊಬ್ಬ ಸಹೋದರ ಮಲ್ಲಯ್ಯ ಎಂಬವರು 1968ರ ಅಕ್ಟೋಬರ್ 29ರಂದು ತಮ್ಮ ಸಹೋದರ ಮೈಲಾರಯ್ಯ ಎಂಬವರಿಗೆ 300 ರೂಪಾಯಿ ಪಡೆದು ಆಕ್ಷೇಪಾರ್ಹವಾದ ಜಮೀನನ್ನು ಹಕ್ಕು ಖುಲಾಸೆ ಮಾಡಿಕೊಟ್ಟಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಮೈಲಾರಯ್ಯ ಅವರ ಕಾನೂನಾತ್ಮಕ ಸಂಬಂಧಿಗಳಿಗೆ ಕ್ರಯಪತ್ರದ ಬಗ್ಗೆ ತಿಳಿದಿರಲಿಲ್ಲ ಎಂಬ ಕಾರಣಕ್ಕೆ ಇದಾಗಲೇ ವರ್ಗಾವಣೆಗೊಂಡಿರುವ ಆಸ್ತಿಗೆ ದೇವರಾಜು ಸ್ವಯಂಚಾಲಿತವಾಗಿ ಹಕ್ಕುದಾರನಾಗಲು ಸಾಧ್ಯವಿಲ್ಲ. ಇಲ್ಲಿ ಅಂದಿನ ಮೈಸೂರಿನ ಉಪವಿಭಾಗಾಧಿಕಾರಿಯು ಅಸಲಿ ಹಕ್ಕು ಪತ್ರಗಳು ಇಲ್ಲದಿದ್ದರೂ ದೇವರಾಜು ಅವರಿಂದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಅಕ್ರಮವಾಗಿ ಆಕ್ಷೇಪಾರ್ಹವಾದ ಭೂಮಿಯನ್ನು ಕ್ರಯ ಮಾಡಿಕೊಟ್ಟಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಆಕ್ಷೇಪಾರ್ಹವಾದ ಭೂಮಿಗೆ 2004ರ ಆಗಸ್ಟ್ 25ರವರೆಗೂ ಜೆ ದೇವರಾಜು ಅವರು ಕಂದಾಯ ಪಾವತಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದಾಗಲೇ ಆಕ್ಷೇಪಾರ್ಹವಾದ ಭೂಮಿಯನ್ನು ಮುಡಾ ವಶಪಡಿಸಿಕೊಂಡು ನಿವೇಶನ, ಸಿಎ ನಿವೇಶನ, ಉದ್ಯಾನ ಇತ್ಯಾದಿ ರೂಪಿಸಿ, ನಿವೇಶನಗಳನ್ನೂ ಹಂಚಿಕೆ ಮಾಡಿತ್ತು. ಅಲ್ಲದೇ, ಆಕ್ಷೇಪಾರ್ಹವಾದ ಭೂಮಿಯ ಲಭ್ಯ ದಾಖಲೆಗಳಲ್ಲಿ ದೇವರಾಜು ಅವರು ಹೆಸರು 1992ರಿಂದ 1998ರವರೆಗೆ ಮಾತ್ರ ಇದೆ ಎಂದು ವಿವರಿಸಿದ್ದಾರೆ.
ಇನ್ನು, 2021ರ ಮಾರ್ಚ್ 20ರಂದು ಮುಡಾ ಮಂಡಳಿ ಸಭೆಯಲ್ಲಿ ಅಂದಿನ ವರುಣಾ ಕ್ಷೇತ್ರದ ಶಾಸಕರಾಗಿದ್ದ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಪಾರ್ವತಿ ಅವರ 13,759 ಚದರ ಮೀಟರ್ (1,48,104 ಚದರ ಅಡಿಗಳು) ಭೂಮಿಗೆ ಪರಿಹಾರವಾಗಿ ಬದಲಿ ನಿವೇಶನ ಹಂಚಿಕೆ ಕುರಿತು ಚರ್ಚೆ ನಡೆದಿತ್ತು. ಅದರ ಬಳಿಕ ಮುಡಾ ಅಧಿಕಾರಿಗಳು ರಿಲೀಸ್ ಡೀಡ್ ಸಲ್ಲಿಸುವಂತೆ ಪಾರ್ವತಿ ಅವರಿಗೆ ಸೂಚಿಸಿದ್ದು, ಅವರು 2021ರ ನವೆಂಬರ್ 25ರಂದು ಸಲ್ಲಿಕೆ ಮಾಡಿದ್ದರು. ಇದಾದ ಬಳಿಕ ಪಾರ್ವತಿ ಅವರಿಗೆ ಆಕ್ಷೇಪಾರ್ಹವಾದ ಭೂಮಿಗೆ ಪರಿಹಾರವಾಗಿ 1999ಕ್ಕೂ ಮುಂಚೆಯೇ ಮುಡಾ ಅಭಿವೃದ್ಧಿಪಡಿಸಿರುವ ವಿಜಯನಗರದ ನಾಲ್ಕನೇ ಹಂತದಲ್ಲಿರುವ, ಎರಡನೇ ಫೇಸ್‌ನಲ್ಲಿನ ಬಡಾವಣೆಯ ಸಿ, ಡಿ, ಇ ಮತ್ತು ಜಿ ಬ್ಲಾಕ್‌ಗಳಲ್ಲಿ 14 ಬದಲಿ ನಿವೇಶಗಳನ್ನು ಮಂಜೂರು ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಸದರಿ ನಿವೇಶನಗಳ ಸದ್ಯದ ಸರ್ಕಾರಿ ಮಾರ್ಗಸೂಚಿ ಮೌಲ್ಯದ ಒಟ್ಟು ಮೊತ್ತವು 8,24,66,496 ರೂಪಾಯಿಗಳು. ಈಗ ವಿಜಯನಗರದಲ್ಲಿ ಮಾರುಕಟ್ಟೆ ಮೌಲ್ಯವು ಪ್ರತಿ ಚದರ ಅಡಿಗೆ 12 ಸಾವಿರದಿಂದ 15 ಸಾವಿರ ರೂಪಾಯಿವರೆಗೆ ಇದ್ದು, ಅವುಗಳ ಒಟ್ಟಾರೆ ಮೌಲ್ಯವು ಸುಮಾರು 55.80 ಕೋಟಿ ರೂಪಾಯಿ ಆಗಲಿದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇಡೀ ಕೃತ್ಯದಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಪುತ್ರ ಯತೀಂದ್ರ, ಮುಡಾ ಹಿಂದಿನ ಅಧ್ಯಕ್ಷ ಎಚ್ ವಿ ರಾಜೀವ್, ಮುಡಾ ಆಯುಕ್ತರಾಗಿದ್ದ ಡಿ ಬಿ ನಟೇಶ್, ಅಂದಿನ ಜಿಲ್ಲಾಧಿಕಾರಿ ಹಾಗೂ ಹಾಲಿ ರಾಯಚೂರು ಕಾಂಗ್ರೆಸ್ ಸಂಸದ ಜಿ ಕುಮಾರ್ ನಾಯ್ಕ್, ಇನ್ನೊಬ್ಬ ಜಿಲ್ಲಾಧಿಕಾರಿ ಎಸ್ ಸೆಲ್ವಕುಮಾರ್, ಮೈಸೂರು ಉತ್ತರದ ಉಪ ನೋಂದಣಾಧಿಕಾರಿ ಎಸ್ ಕೆ ಸಿದ್ದಯ್ಯ, ಜೆ ದೇವರಾಜು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇವರೆಲ್ಲರ ವಿರುದ್ಧ ಕ್ರಮದ ಅಗತ್ಯವಿದೆ ಎಂದು ಹೇಳಿದ್ದಾರೆ.
ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 7, 9, 11, 12 ಮತ್ತು 15 ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 59, 61, 62, 201, 227, 228, 229, 239, 314, 316(5), 318(2), 318(3), 319, 322, 324, 324(1), 324(2), 324(3), 335, 336, 338 ಮತ್ತು 340ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿಸಬೇಕು ಎಂದು ಮನವಿ ಮಾಡಿದ್ದಾರೆ.