ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರವಾಗಿದೆ ಎಂದು ಮುಖ್ಯಮಂತ್ರಿಯವರ ವಿರುದ್ಧ ನೀಡಲಾಗಿರುವ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಿರುವ ಶೋಕಾಸ್ ನೋಟಿಸ್ ಅನ್ನು ಹಿಂಪಡೆಯಲು ಆಗ್ರಹಿಸಿ ರಾಜ್ಯ ಸಚಿವ ಸಂಪುಟವು ರಾಜ್ಯಪಾಲರಿಗೆ ಸಲಹೆ ನೀಡಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ರೂಪದಲ್ಲಿ 14 ನಿವೇಶನ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎನ್ನುವ ದೂರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಾರಿ ಮಾಡಿರುವ ಶೋಕಾಸ್ ನೋಟಿಸ್ ನೀಡಿದ್ದರು. ಈ ವಿಚಾರವಾಗಿ ಮುಖ್ಯಮಂತ್ರಿಯವರ ಗೈರಿನಲ್ಲಿ ಅವರ ಸೂಚನೆಯಂತೆ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ತೀರ್ಮಾನಿಸಿತು. ತಮ್ಮ ಕುರಿತ ವಿಚಾರದ ಚರ್ಚೆಯು ಸಂಪುಟ ಸಭೆಯ ವಿಷಯವಾಗಿದ್ದರಿಂದ ಮುಖ್ಯಮಂತ್ರಿಯವರು ಸಭೆಯಿಂದ ಹೊರಗುಳಿದಿದ್ದರು.
ಸಂಪುಟ ಸಭೆಯ ತೀರ್ಮಾನವನ್ನು ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹಂಚಿಕೊಂಡರು. “ವಾಸ್ತವಿಕ ಅಂಶಗಳು ಮತ್ತು ಎಲ್ಲಾ ಕಾರಣಗಳನ್ನು ಪರಿಗಣಿಸಿದ ನಂತರ ಜುಲೈ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯಬೇಕು. ಅಭಿಯೋಜನೆಗೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕು ಎಂದು ಸಲಹೆ ನೀಡಿದ್ದು, ರಾಜಭವನಕ್ಕೆ ಶೀಘ್ರ ಮಾಹಿತಿ ರವಾನೆಯಾಗಲಿದೆ” ಎಂದು ಡಿಕೆಶಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
“ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಟಿ ಜೆ ಅಬ್ರಾಹಂ ಜುಲೈ 26ರ ಬೆಳಿಗ್ಗೆ 11.30ಕ್ಕೆ ದೂರು ನೀಡಿ ಅಭಿಯೋಜನೆಗೆ ಕೋರಿದ್ದಾರೆ. ಅಂದೇ ಸಂಜೆ 6.30ಕ್ಕೆ ರಾಜ್ಯದ ಮುಖ್ಯಕಾರ್ಯದರ್ಶಿಯಾಗಿದ್ದ ರಜನೀಶ್ ಗೋಯೆಲ್ ಸುಮಾರು 200 ಪುಟಗಳ ಸುದೀರ್ಘ ಉತ್ತರ ನೀಡಿದ್ದಾರೆ. ಇದಕ್ಕೂ ಮುನ್ನವೇ ರಾಜ್ಯಪಾಲರು ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಏಳು ದಿನದಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ. ಇಷ್ಟು ತರಾತುರಿಯಲ್ಲಿ ತೀರ್ಮಾನ ಮಾಡಿರುವುದೇಕೆ? ಇದರ ಹಿನ್ನೆಲೆ ಏನು? ಇಲ್ಲಿ ಪ್ರಜಾಪ್ರಭುತ್ವದ ಸರ್ಕಾರ ಇಲ್ಲವೇ? ಯಾವ ತನಿಖಾ ಆಯೋಗದ ವರದಿ ಆಧರಿಸಿ ನೋಟಿಸ್ ನೀಡಲಾಗಿದೆ? ಹೀಗಿರುವಾಗ ಮುಖ್ಯಮಂತ್ರಿಗೆ ಶೋಕಾಸ್ ನೀಡಿರುವುದು ಪ್ರಜಾಪ್ರಭುತ್ವ, ಸಂವಿಧಾನದ ಕಗ್ಗೊಲೆ ಅಲ್ಲವೇ?” ಎಂದು ಡಿ ಕೆ ಶಿವಕುಮಾರ್ ಅವರು ರಾಜ್ಯಪಾಲರ ವಿರುದ್ಧ ಕಿಡಿಕಾರಿದರು.
“ಜುಲೈ 5ರಂದು ಪತ್ರಿಕೆಗಳಲ್ಲಿ ಮುಡಾದಲ್ಲಿ 4 ಸಾವಿರ ಕೋಟಿ ರೂಪಾಯಿ ಹಗರಣ ಎಂದು ವರದಿ ಬಂದಿದೆ. ಈ ಸಂಬಂಧ ವರದಿ ನೀಡಿ ಎಂದು ರಾಜ್ಯಪಾಲರು ಕೇಳಿದ್ದರು. ಜುಲೈ 15ರಂದು ಕರ್ನಾಟಕ ರಾಜ್ಯ ರೈತ ಸಂಘದ ಒಕ್ಕೂಟ ವಿಸ್ತೃತವಾದ ಮನವಿ ನೀಡಿದೆ ಎಂದು ರಾಜ್ಯಪಾಲರು ಮತ್ತೊಂದು ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರ ನೇತೃತ್ವದ ತನಿಖೆಗೆ ಆದೇಶಿಸಲಾಗಿದೆ” ಎಂದರು.
“ದೇಶದ ವಿವಿಧ ಹೈಕೋರ್ಟ್‌ಗಳ ತೀರ್ಪು, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ, ಅನೇಕ ರಾಜ್ಯಗಳಲ್ಲಿ ರಾಜ್ಯಪಾಲರು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಹೇಗೆಲ್ಲಾ ತೀರ್ಪು ಬಂದಿವೆ ಮತ್ತು ನ್ಯಾಯಾಲಯಗಳು ರಾಜ್ಯಪಾಲರಿಗೆ ಹೇಗೆ ಮಾರ್ಗದರ್ಶನ ಮಾಡಿವೆ. ಯಾವ ಸರ್ಕಾರದ ಸಂದರ್ಭದಲ್ಲಿ ಯಾರೆಲ್ಲಾ ಯಾವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು" ಎಂದು ಡಿ ಕೆ ಶಿವಕುಮಾರ್ ಅವರು ಮಾಹಿತಿ ನೀಡಿದರು.
“ಇಡೀ ಘಟನಾವಳಿ, ವಾಸ್ತವಿಕ ಅಂಶಗಳು ಹಾಗೂ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದಾಗ ರಾಜ್ಯಪಾಲರಂಥ ಸಾಂವಿಧಾನಿಕ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ರಾಜಕೀಯ ಕಾರಣಕ್ಕಾಗಿ ಕಾನೂನುಬದ್ಧವಾಗಿ ಆಯ್ಕೆಯಾಗಿರುವ ಬಹುಮತದ ಸರ್ಕಾರವನ್ನು ದುರ್ಬಲಗೊಳಿಸಲಾಗುತ್ತಿದೆ ಎಂಬ ಸ್ಪಷ್ಟ ತೀರ್ಮಾನಕ್ಕೆ ಬರಲಾಗಿದೆ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
“ಸಂವಿಧಾನದ 163ನೇ ವಿಧಿಯ ಪ್ರಕಾರ ಸಂಪುಟದ ಸಲಹೆ-ಸೂಚನೆ ಆಧರಿಸಿ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕು. ಪ್ರಾಸಿಕ್ಯೂಷನ್‌ಗೆ (ಅಭಿಯೋಜನೆ) ಅನುಮತಿ ಕೊಡಲು ರಾಜ್ಯಪಾಲರಿಗೆ ಸಂವಿಧಾನದಲ್ಲಿ ಅಧಿಕಾರವಿಲ್ಲ. ಜುಲೈ 26ರಂದು ಅಬ್ರಹಾಂ ದೂರು ಬಂದಿದ್ದು, ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್ ನೀಡಿದ್ದಾರೆ. ಭ್ರಷ್ಟಾಚಾರ ನಿಷೇಧ ಕಾಯಿದೆಯ ಸೆಕ್ಷನ್‌ಗಳಾದ 17ಎ, 19, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 200 ಅಡಿ ಅಬ್ರಹಾಂ ಪೂರ್ವಾನುಮತಿ ಕೋರಿದ್ದಾರೆ. ಅಲ್ಲದೆ ಐಪಿಸಿ ಸೆಕ್ಷನ್‌ನಲ್ಲಿನ ಏಳೆಂಟು ಸೆಕ್ಷನ್‌ಗಳನ್ನು ಅಬ್ರಹಾಂ ಉಲ್ಲೇಖಿಸಿದ್ದಾರೆ. ಐಪಿಸಿ ಸೆಕ್ಷನ್‌ಗಳನ್ನು ಉಲ್ಲೇಖಿಸಿದ ಮಾತ್ರಕ್ಕೆ ಆ ಸಂಬಂಧ ಅಪರಾಧ ಕಾಣದು” ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಕೆ ಎಸ್ ಪೊನ್ನಣ್ಣ ವಿವರಿಸಿದರು.
“ಪಿ ಸಿ ಕಾಯಿದೆ ಸೆಕ್ಷನ್ 17ಎ ಅಡಿ ಪ್ರಕರಣದ ತನಿಖೆ ನಡೆಸುವ ತನಿಖಾಧಿಕಾರಿಯು ಸಕ್ಷಮ ಪ್ರಾಧಿಕಾರಕ್ಕೆ ಪೂರ್ವಾನುಮತಿ ಕೋರಬೇಕು. ಜುಲೈ 18ರಂದು ಮೈಸೂರು ಲೋಕಾಯುಕ್ತ ಠಾಣೆಗೆ ಅಬ್ರಹಾಂ ದೂರು ನೀಡಿದ್ದಾರೆ. ಇಲ್ಲಿ ತನಿಖೆ ಮಾಡುವ ಅಧಿಕಾರ ಹೊಂದಿರುವ ಅಧಿಕಾರಿಯು ಅಭಿಯೋಜನೆಯ ಅಗತ್ಯ ಮನಗಂಡು ಅನುಮತಿ ಕೋರಬೇಕು. ಸೆಕ್ಷನ್ 19 ಮತ್ತು ಬಿಎನ್‌ಎಸ್ 200 ಅಡಿಯಲ್ಲೂ ಅನುಮತಿ ಕೊಡುವ ಸಂದರ್ಭ ಈಗ ಇಲ್ಲ. ಮೂಲಭೂತ ವಿಚಾರಗಳೇ ಇಲ್ಲದ ಅರ್ಜಿ ಆಧರಿಸಿ, ಶೋಕಾಸ್ ನೋಟಿಸ್ ನೀಡಲಾಗಿದೆ" ಎಂದು ಆಕ್ಷೇಪಿಸಿದರು
“ಖಾಸಗಿ ವ್ಯಕ್ತಿ ಎರಡು ರೀತಿಯಲ್ಲಿ ದೂರು ನೀಡಬಹುದು. ಮೊದಲಿಗೆ ಪೊಲೀಸರಿಗೆ ದೂರು ನೀಡಬಹುದು. ಆಗ ತನಿಖಾಧಿಕಾರಿ ಪಿಸಿ ಕಾಯಿದೆ ಸೆಕ್ಷನ್ 17ಎ ಅಡಿ ಅನುಮತಿ ಪಡೆಯಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ. ಒಂದೊಮ್ಮೆ ಪೊಲೀಸರ ಈ ನಿರ್ಧಾರ ಕ್ರಮಬದ್ಧವಾಗಿಲ್ಲ ಎಂದರೆ ಖಾಸಗಿ ವ್ಯಕ್ತಿಯು ಪೊಲೀಸ್ ವರಿಷ್ಠಾಧಿಕಾರಿಯ ಬಳಿಗೆ ದೂರು ಕೊಂಡೊಯ್ಯಬಹುದು. ಆನಂತರ ಸಂಬಂಧಿತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಬಹುದು. ಆನಂತರ ಪಿಸಿ ಕಾಯಿದೆಯ ಸೆಕ್ಷನ್ 19 ಪ್ರಶ್ನೆ ಬರಲಿದೆ. ಈ ವಿಚಾರಗಳು ಕಾನೂನು, ನ್ಯಾಯಾಲಯಗಳ ತೀರ್ಪುಗಳಲ್ಲಿ ಸ್ಪಷ್ಟವಾಗಿದೆ. ಇಲ್ಲಿ ಸಂಪೂರ್ಣವಾಗಿ ರಾಜಕೀಯ ಕಾರಣವಿದೆಯೇ ವಿನಾ ಕಾನೂನಾತ್ಮಕ ನಿರ್ಣಯವಲ್ಲ” ಎಂದು ವಿವರಿಸಿದರು.
“ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಬಾಲರಾಜ್ ಮತ್ತು ಸಿರಾಜ್ ಅಹ್ಮದ್ ಅವರು ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ಸ್ಥಾಪಿಸಲಾಗಿದ್ದ ನ್ಯಾಯಾಲಯಕ್ಕೆ ಸಿಆರ್‌ಪಿಸಿ 200ರ ಅಡಿ ಖಾಸಗಿ ದೂರು ಸಲ್ಲಿಸಿದ್ದರು. ಆಗ ಅಂದಿನ ನ್ಯಾಯಾಧೀಶರು ಪ್ರಕರಣವನ್ನು ಮುಂದುವರಿಸಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ತರಬೇಕು ಎಂದು ಬಾಕಿ ಉಳಿಸಿದ್ದರು. ಆಗ ದೂರುದಾರರಾದ ಸಿರಾಜ್ ಮತ್ತು ಬಾಲರಾಜ್ ಅವರು ನ್ಯಾಯಾಲಯದ ಆದೇಶ, ದೂರು ಮತ್ತು ಸಂಬಂಧಿತ ದಾಖಲೆಗಳನ್ನು ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಸಲ್ಲಿಸಿ, ಪಿಸಿ ಕಾಯಿದೆ ಸೆಕ್ಷನ್ 19ರ ಅಡಿ ಅನುಮತಿ ಕೋರಿದ್ದರು. ಇದಕ್ಕೆ ಅಂದಿನ ರಾಜ್ಯಪಾಲರು ಅನುಮತಿಸಿದ್ದರು. ಈ ಅನುಮತಿಯನ್ನು ಹೈಕೋರ್ಟ್ ರದ್ದುಪಡಿಸಿತ್ತು. ಅಲ್ಲದೇ, ಸಚಿವ ಸಂಪುಟದ ಸಲಹೆಯನ್ನು ಯಾಕೆ ಪರಿಗಣಿಸಿಲ್ಲ ಎಂಬ ಪ್ರಶ್ನೆಗೆ ಅಂದು ಹೈಕೋರ್ಟ್ ಉತ್ತರಿಸಿದೆ. ಹೀಗಾಗಿ, ಅಂದಿನ ಪ್ರಕರಣ, ಪ್ರಕ್ರಿಯೆ ಬೇರೆಯಾಗಿತ್ತು. ಅಂದು ಉದ್ಭವವಾದ ಕಾನೂನನ್ನು ಇಂದು ಉಲ್ಲಂಘಿಸಲಾಗಿದೆ” ಎಂದರು.
ಖಾಸಗಿ ದೂರನ್ನು ಅಬ್ರಹಾಂ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸದೇ ಮೊದಲಿಗೆ ರಾಜ್ಯಪಾಲರ ಬಳಿ ಕೊಂಡೊಯ್ದಿರುವುದು ಕಾನೂನುಬಾಹಿರ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
“ಬಿಜೆಪಿಯ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಹಾಲಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಅಭಿಯೋಜನೆಗೆ ಅನುಮತಿಸುವಂತೆ ಕೋರಿ ರಾಜ್ಯಪಾಲರಿಗೆ ಸಲ್ಲಿಸಿರುವ ಅರ್ಜಿಗಳಿಗೆ ವರ್ಷಗಳೇ ಆಗಿವೆ. ಸಿದ್ದರಾಮಯ್ಯ ಅವರ ವಿರುದ್ಧ ಜುಲೈ 26ರ 11.30ಗೆ ದೂರು ಬಂದಿದೆ. ಮುಖ್ಯ ಕಾರ್ಯದರ್ಶಿ ಅವರು 60 ಪುಟಗಳ ಉತ್ತರವನ್ನು ಸಂಜೆ 6.30ಕ್ಕೆ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಅವುಗಳನ್ನು ಓದಲು ಕನಿಷ್ಠ ಒಂದು ದಿನ ಬೇಕು. ಇದನ್ನು ಓದುವುದಕ್ಕೂ ಮುನ್ನವೇ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಇದೆಲ್ಲವನ್ನೂ ನೋಡಿದರೆ ಸಾಮಾನ್ಯ ವ್ಯಕ್ತಿಗೂ ಇದು ರಾಜಕೀಯ ಪಿತೂರಿ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ” ಎಂದರು.
“ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ಸಲಹೆಗೆ ಸಾಕಷ್ಟು ಮಹತ್ವ ನೀಡಿ, ಗಂಭೀರವಾಗಿ ಪರಿಗಣಿಸಿ ಒಂದು ವಾರ ಚರ್ಚಿಸಿ, ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಪ್ರಕರಣ, ಎಸ್ ಆರ್ ಬೊಮ್ಮಾಯಿ ಪ್ರಕರಣದಲ್ಲಿ ಏನೇನು ಹೇಳಲಾಗಿದೆ ಎಂಬುದೆಲ್ಲವನ್ನೂ ಗಂಭೀರವಾಗಿ ಅಧ್ಯಯನ ಮಾಡಿ ಉತ್ತರಿಸಲಾಗಿದೆ. ಹೀಗಾಗಿ, ಒಂದೇ ಬಾರಿಗೆ ರಾಜ್ಯಪಾಲರ ವಿರುದ್ಧ ನಿರ್ಣಯ ಮಾಡಲಾಗದು. ಅದು ಕೊನೆಯ ಹಂತ. ಈಗ ಅವರು ಕೇಳಿರುವುದು ಕಾನೂನುಬಾಹಿರ ಎಂಬುದು ನಮ್ಮ ಅಭಿಪ್ರಾಯ. ನಮ್ಮ ಸಲಹೆಗೆ ಗೌರವ ಕೊಡುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯಪಾಲರು ತಮಗೆ ಬಂದಿದ್ದ ದೂರನ್ನು ಸರ್ಕಾರಕ್ಕೆ ಕಳುಹಿಸಿದ್ದರು. ಇದನ್ನು ಆಧರಿಸಿ ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ ನೇತೃತ್ವದ ಏಕಸದಸ್ಯ ಸಮಿತಿ ರಚಿಸಲಾಗಿದೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಚಿವರಾದ ಎಚ್ ಕೆ ಮುನಿಯಪ್ಪ, ಎಂ ಬಿ ಪಾಟೀಲ್ ಹಾಗೂ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.