ತುಮಕೂರು ಜಿಲ್ಲೆಯ ಮಧುಗಿರಿಯ ವಿಚಾರಣಾಧೀನ ನ್ಯಾಯಾಲಯವು ಹೊರಡಿಸಿರುವ ಜಾಮೀನುರಹಿತ ವಾರೆಂಟ್ ಅನ್ನು ವಜಾ ಮಾಡುವಂತೆ ಕೋರಿ ತೆಲುಗು ಕವಿ ಪೆಂಡ್ಯಾಲ ವರವರ ರಾವ್ ಅವರು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ನಕ್ಸಲ್ ದಾಳಿ ಪ್ರಕರಣದಲ್ಲಿ ವರವರ ರಾವ್ ಅವರು ಆರೋಪಿಯಾಗಿದ್ದು, ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದ ಬಳಿಕ ಕೆಲವೇ ದಿನಗಳಲ್ಲಿ ಪ್ರಕರಣವು ವಿಚಾರಣೆಗೆ ಬರಲಿದೆ.
ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಅಕ್ಟೋಬರ್ 21ರಂದು ಮಧುಗಿರಿಯಲ್ಲಿರುವ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ರಾವ್ ಅವರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿತ್ತು. ಅಕ್ಟೋಬರ್ 28ರಂದು ವರವರ ರಾವ್ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ವಿಚಾರಣಾಧೀನ ನ್ಯಾಯಾಲಯವು ಆದೇಶ ಮಾಡಿತ್ತು.
2019ರ ನವೆಂಬರ್ 28ರಂದು ತಮಗೆ ಪ್ರಕರಣದಲ್ಲಿ ಜಾಮೀನು ದೊರೆತಿತ್ತು. ವಿಚಾರಣಾಧೀನ ನ್ಯಾಯಾಲಯವು ಮನವಿಯನ್ನು ತಿರಸ್ಕಿರಿಸಿದ್ದು, ಅಕ್ಟೋಬರ್ 21ರಂದು ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ ಎಂದು ಮನವಿಯಲ್ಲಿ ರಾವ್ ತಿಳಿಸಿದ್ದಾರೆ.
ವೈದ್ಯಕೀಯ ಕಾರಣದ ಆಧಾರದಲ್ಲಿ ಬಾಂಬೆ ಹೈಕೋರ್ಟ್ ಒಂದು ತಿಂಗಳ ಅವಧಿಗೆ ವರವರ ರಾವ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಮುಂಬೈನ ಎನ್‌ಐಎ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅಕ್ಟೋಬರ್ 21ರಂದು ಮಧುಗಿರಿಯ ವಿಚಾರಣಾಧೀನ ನ್ಯಾಯಾಲಯದಲ್ಲಿ ಹಾಜರಾಗದೇ ಇದ್ದುದಕ್ಕೆ ನೈಜ ಕಾರಣವಿದೆ. ಇದು ಉದ್ದೇಶಪೂರ್ವಕವಲ್ಲ ಮತ್ತು ತಮ್ಮ ನಿಯಂತ್ರಣವನ್ನು ಮೀರಿದ್ದಾಗಿದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲು ಅನುವು ಮಾಡಿಕೊಡಬೇಕು ಎಂದು ಹೈಕೋರ್ಟ್‌ಗೆ ರಾವ್ ಮನವಿ ಮಾಡಿದ್ದಾರೆ.
2005ರ ಫೆಬ್ರವರಿ 10ರಂದು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಶಾಲೆ ಬಳಿ ನಕ್ಸಲರು ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಯ ಏಳು ಮಂದಿ ಪೊಲೀಸರು ಮತ್ತು ಒಬ್ಬ ನಾಗರಿಕರನ್ನು ಗುಂಡಿಟ್ಟು ಕೊಂದಿದ್ದರು. 2005ರ ಫೆಬ್ರವರಿ 5ರಂದು ಚಿಕ್ಕಮಗಳೂರಿನ ಮೆಣಸಿನಹಾಡ್ಯದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಅವರನ್ನು ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಂದಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿತ್ತು.