ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಡಾ. ವರವರ ರಾವ್‌ ಅವರಿಗೆ ಆರು ತಿಂಗಳು ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್

“ವಿಚಾರಣಾಧೀನ ಆರೋಪಿಯ ಸ್ಥಿತಿಯನ್ನು ನೋಡಿಯೂ ಅವರನ್ನು ಜೈಲಿಗೆ ಕಳುಹಿಸುವುದು ಸೂಕ್ತವಲ್ಲ ಎಂದು ನಮಗನ್ನಿಸುತ್ತದೆ” ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಮನೀಶ್ ಪಿಟಾಲೆ ಆದೇಶಿಸಿದ್ದಾರೆ.
Varavara rao, NIA and Bombay HC
Varavara rao, NIA and Bombay HC

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿರುವ 82 ವರ್ಷದ ಕವಿ ಡಾ. ವರವರ ರಾವ್‌ ಅವರಿಗೆ ವೈದ್ಯಕೀಯ ಆಧಾರದ ಮೇಲೆ ಬಾಂಬೆ ಹೈಕೋರ್ಟ್‌ ಸೋಮವಾರ ಆರು ತಿಂಗಳ ಕಾಲ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 1ರಂದು ನ್ಯಾಯಾಲಯವು ಆದೇಶ ಕಾಯ್ದಿರಿಸಿತ್ತು.

“ವಿಚಾರಣಾಧೀನ ಆರೋಪಿಯ ಸ್ಥಿತಿಯನ್ನು ನೋಡಿಯೂ ಅವರನ್ನು ಜೈಲಿಗೆ ಕಳುಹಿಸುವುದು ಸೂಕ್ತವಲ್ಲ ಎಂದು ನಮಗನ್ನಿಸುತ್ತದೆ,” ಎಂದು ನ್ಯಾಯಾಲಯ ಆದೇಶ ಹೊರಡಿಸುವಾಗ ಹೇಳಿದೆ.

“ಜಾಮೀನು ನೀಡುವುದಕ್ಕೆ ಇದು ಅತ್ಯಂತ ಸೂಕ್ತ ಪ್ರಕರಣ ಎಂದು ನಮಗೆ ಅನ್ನಿಸುತ್ತಿದೆ. ಹಾಗೆ ಮಾಡದೇ ಇದ್ದಲ್ಲಿ ನಾವು ಮಾನವ ಹಕ್ಕುಗಳ ರಕ್ಷಕ ಹೊಣೆ ಮತ್ತು ಸಂವಿಧಾನದ 21ನೇ ವಿಧಿಯಡಿ ಬರುವ ಜೀವಿಸುವ ಹಕ್ಕಿನಲ್ಲಿ ಮಿಳಿತವಾಗಿರುವ ಆರೋಗ್ಯದ ಹಕ್ಕನ್ನು ಸಂರಕ್ಷಿಸುವ ಸಾಂವಿಧಾನಿಕ ಕರ್ತವ್ಯದಿಂದ ವಿಮುಖವಾದಂತಾಗುತ್ತದೆ” ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯದ ವ್ಯಾಪ್ತಿಯ ಒಳಗೆ ರಾವ್ ಉಳಿದುಕೊಳ್ಳಬೇಕು. ಎಫ್‌ಐಆರ್‌ ದಾಖಲಿಸಲು ಕಾರಣವಾದಂತಹ ಅಥವಾ ಆ ಬಗೆಯ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ರಾವ್‌ ಅವರಿಗೆ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯವು ಆದೇಶ ಹೊರಡಿಸುತ್ತಿದ್ದಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಅವರು ಮೂರು ವಾರಗಳ ಕಾಲ ಆದೇಶ ತಡೆಹಿಡಿಯುವಂತೆ ಕೋರಿದರು. ಇದಕ್ಕೆ ನ್ಯಾಯಾಲಯ ನಿರಾಕರಿಸಿತು.

Also Read
ವರವರ ರಾವ್‌ 149 ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ:‌ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್‌

ಅಗತ್ಯ ಬಿದ್ದಾಗ ರಾವ್‌ ಅವರು ವಿಚಾರಣೆಗೆ ಹಾಜರಾಗಬೇಕು. ಆದರೆ, ಭೌತಿಕವಾಗಿ ವಿಚಾರಣೆಯಲ್ಲಿ ಭಾಗವಹಿಸುವುದರಿಂದ ಅವರು ವಿನಾಯಿತಿ ಕೋರಬಹುದು ಎಂದು ಪೀಠ ಹೇಳಿದೆ. ರಾವ್‌ ಅವರ ಪತ್ನಿ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿ ರಾವ್‌ ಅವರಿಗೆ ಜಾಮೀನು ನೀಡುವಂತೆ ಕೋರಿದ್ದರು. ಆದರೆ, ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸುವಂತೆ ಸೂಚಿಸಿತ್ತು.

ರಾವ್‌ ಅವರದ್ದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ರಾಜ್ಯ ಗೃಹ ಸಚಿವರು ಇಚ್ಛಿಸಿದ್ದಾರೆ ಎಂದು ಮುಖ್ಯ ಸರ್ಕಾರಿ ಅಭಿಯೋಜಕ ದೀಪಕ್‌ ಠಾಕ್ರೆ ಅವರು ನ್ಯಾಯಾಲಯಕ್ಕೆ ವಿವರಿಸಿದ್ದರು. ಸದ್ಯ, ರಾವ್‌ ಅವರು ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾವ್‌ ಅವರಿಗೆ ವಯಸ್ಸಾಗಿದ್ದು, ಅವರ ಆರೋಗ್ಯ ಕುಸಿಯುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಮಾನವೀಯ ನೆಲೆಯಲ್ಲಿ ವಾದಿಸುವಂತೆ ವಿಚಾರಣೆಯ ಸಂದರ್ಭದಲ್ಲಿ ಪೀಠವು ವಕೀಲರಿಗೆ ಸೂಚಿಸಿತ್ತು. ಹಿರಿಯ ವಕೀಲರಾದ ಆನಂದ್‌ ಗ್ರೋವರ್‌ ಮತ್ತು ಇಂದಿರಾ ಜೈಸಿಂಗ್‌ ಅವರು ರಾವ್‌ ಅವರನ್ನು ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com