ಸುದ್ದಿಗಳು

ಎರಡು ದಶಕಗಳ ಹಿಂದಿನ ಪ್ರಕರಣ: ಮುಖ್ತಾರ್ ಅನ್ಸಾರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಅಲಾಹಾಬಾದ್ ಹೈಕೋರ್ಟ್

ಕೊಲೆ, ಸುಲಿಗೆ, ಅಪಹರಣ ಮತ್ತು ದರೋಡೆ ಸೇರಿದಂತೆ ಘೋರ ಅಪರಾಧಗಳನ್ನು ಎಸಗುವ ತಂಡ ಅನ್ಸಾರಿ ಬಳಿ ಇತ್ತು ಎಂದು 1999ರಲ್ಲಿ ದಾಖಲಿಸಲಾದ ಎಫ್ಐಆರ್‌ ಆಧರಿಸಿ ಶಿಕ್ಷೆ ವಿಧಿಸಲಾಗಿದೆ.

Bar & Bench

ಉತ್ತರ ಪ್ರದೇಶದ ಸುಲಿಗೆಕೋರರು ಮತ್ತು ಸಮಾಜ ವಿರೋಧಿ ಚಟುವಟಿಕೆಗಳ (ತಡೆ)  ಕಾಯಿದೆಯಡಿ ಬಹುಜನ ಸಮಾಜ ಪಕ್ಷದ ಶಾಸಕ ಮುಖ್ತಾರ್ ಅನ್ಸಾರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 50,000 ದಂಡ ವಿಧಿಸಿ ಅಲಾಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠ ಶುಕ್ರವಾರ ತೀರ್ಪು ನೀಡಿದೆ [ಉತ್ತರಪ್ರದೇಶ ಸರ್ಕಾರ ಮತ್ತು ಮುಖ್ತಾರ್ ಅನ್ಸಾರಿ ನಡುವಣ ಪ್ರಕರಣ].

ಅನ್ಸಾರಿ ಅವರನ್ನು ದೋಷಮುಕ್ತಗೊಳಿಸಿ ಸಂಸದರು/ಶಾಸಕರ ಪ್ರಕರಣಗಳನ್ನು ಆಲಿಸುವ ವಿಶೇಷ ನ್ಯಾಯಾಲಯ 2020ರಲ್ಲಿ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರು ರದ್ದುಗೊಳಿಸಿದರು.

ಕೊಲೆ, ಸುಲಿಗೆ, ಅಪಹರಣ ಮತ್ತು ದರೋಡೆ ಸೇರಿದಂತೆ ಘೋರ ಅಪರಾಧಗಳನ್ನು ಎಸಗುವ ತಂಡ ಅನ್ಸಾರಿ ಬಳಿ ಇತ್ತು ಎಂದು 1999ರಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ ವಿವರಿಸಲಾಗಿತ್ತು. ಅನ್ಸಾರಿ ಜನರ ಹೃದಯ ಮತ್ತು ಮನಸ್ಸಿನಲ್ಲಿ ಭೀತಿಯನ್ನು ಹುಟ್ಟಿಸುವ ಮೂಲಕ ತನ್ನ ಅಪರಾಧ ಕೃತ್ಯಗಳ ವಿರುದ್ಧ ಜನರು ದೂರು ದಾಖಲಿಸಿದಂತೆ ಮಾಡಿದ್ದರು. ಹಾಗಾಗಿ, ಲಖನೌ ಮತ್ತು ಸುತ್ತಮುತ್ತಲಿನ ಜನತೆ ಅಭದ್ರತೆ, ಭೀತಿಯಿಂದ ಬದುಕುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿತ್ತು.

ಎಫ್‌ಐಆರ್‌ ದಾಖಲಿಸದೆ ಇದ್ದರೂ ಸಹ ಸುಲಿಗೆಕೋರರ ಕಾಯಿದೆಯಡಿ (ಗ್ಯಾಂಗ್‌ಸ್ಟರ್‌ ಆಕ್ಟ್‌) ವ್ಯಕ್ತಿಯೊಬ್ಬರ ವಿರುದ್ಧ ವಿಚಾರಣೆ ನಡೆಸಬಹುದಾಗಿದೆ. ಕಾಯಿದೆಯ ಉದ್ದೇಶವೇ ಅಪರಾಧ ಕೃತ್ಯಗಳಲ್ಲಿ ತೊಡಗುವ ಗ್ಯಾಂಗ್‌ ಹಾಗೂ ಗ್ಯಾಂಗ್‌ಸ್ಟರ್‌ಗಳು ಎಸಗುವ ಸಂಘಟಿತ ಅಪರಾಧ ಮತ್ತು ಅಪರಾಧ ಕೃತ್ಯಗಳನ್ನು ತಡೆಯುವುದಾಗಿದೆ ಎಂದು ರಾಜ್ಯದ ಪರ ವಕೀಲರು ವಾದಿಸಿದ್ದರು.

ಜೈಲರ್‌ಗೆ ಪಿಸ್ತೂಲ್ ತೋರಿಸಿ 2003ರಲ್ಲಿ ಕೊಲೆ ಬೆದರಿಕೆ ಹಾಕಿದ್ದಕ್ಕಾಗಿ ಅನ್ಸಾರಿಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಕಳೆದ ಬುಧವಾರವಷ್ಟೇ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.