Mukhtar Ansari  Facebook
ಸುದ್ದಿಗಳು

ಅನ್ಸಾರಿ ಜನರೊಳಗೆ ಭಯ ಬಿತ್ತುತ್ತಾರೆ, ಅಂತಹವರು ಶಾಸನ ರೂಪಿಸುವುದು ದುರಂತ: ಜಾಮೀನು ನಿರಾಕರಿಸಿದ ಅಲಾಹಾಬಾದ್ ಹೈಕೋರ್ಟ್

ಬಾರಾಬಂಕಿ ಆಂಬ್ಯುಲೆನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಬಿದ್ದಿದೆ. ಜೈಲಿನಿಂದ ನ್ಯಾಯಾಲಯಕ್ಕೆ ತೆರಳುವಾಗ ಅಹಿತಕರ ಘಟನೆ ತಪ್ಪಿಸಲು ಆಂಬುಲೆನ್ಸ್‌ಅನ್ನು ಅಕ್ರಮವಾಗಿ ನೋಂದಾಯಿಸಿ ಬಳಸುತ್ತಿದ್ದರು ಎಂಬ ಆರೋಪ ಅವರ ಮೇಲಿದೆ.

Bar & Bench

ಬಾರಾಬಂಕಿ ಆಂಬುಲೆನ್ಸ್‌ ಪ್ರಕರಣದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕ ಮುಖ್ತಾರ್ ಅನ್ಸಾರಿಗೆ ಜಾಮೀನು ನೀಡಲು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ [ಮುಖ್ತಾರ್ ಅನ್ಸಾರಿ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].

ಅನ್ಸಾರಿ ಜನರ ಮನಸ್ಸು ಮತ್ತು ಹೃದಯದಲ್ಲಿ ಎಣೆಯಿಲ್ಲದ ಭಯ ಬಿತ್ತುವವರಾಗಿದ್ದು ಅವರು ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷ್ಯ ನಾಶ ಮಾಡಬಹುದು ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟರು.

ಅನ್ಸಾರಿ ಅವರಂತಹ ಕ್ರಿಮಿನಲ್‌ಗಳು ಶಾಸನ ರೂಪಿಸುವವರಾಗಿರುವುದು ಭಾರತ ಗಣರಾಜ್ಯದ ದುರಂತ ಮತ್ತು ಅದು ಪ್ರಜಾಪ್ರಭುತ್ವಕ್ಕೆ ಆದ ದೊಡ್ಡ ಗಾಯ ಎಂದು ಕೂಡ ನ್ಯಾಯಾಲಯ ಹೇಳಿದೆ.

ಬಾರಾಬಂಕಿ ಆಂಬ್ಯುಲೆನ್ಸ್ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸಿದೆ. ಅನ್ಸಾರಿ ವೈದ್ಯರೊಬ್ಬರಿಗೆ ಸೇರಿದ್ದ ಆಂಬ್ಯುಲೆನ್ಸ್‌ಅನ್ನು ಒತ್ತಾಯಪೂರ್ವಕವಾಗಿ ಹಣ ನೀಡಿ ಪಡೆದು ನಕಲಿ ದಾಖಲೆ ಮೂಲಕ ನೋಂದಣಿ ಮಾಡಿಸಿಕೊಂಡಿದ್ದಾರೆ. ತಮ್ಮ ಮೇಲೆ ಯಾವುದೇ ದಾಳಿ ನಡೆಯದಂತೆ ಜೈಲಿನಿಂದ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ತಮ್ಮ ರಕ್ಷಣೆಗಿರುವ ಖಾಸಗಿ ಅಂಗರಕ್ಷಕರು ತಮ್ಮನ್ನು ಹಿಂಬಾಲಿಸಲು ಅನುವಾಗುವಂತೆ ಆಂಬುಲೆನ್ಸ್‌ಅನ್ನು ಬಳಸುತ್ತಿರುವ ಆರೋಪ ಅವರ ಮೇಲಿದೆ.