ಅನ್ಸಾರಿ ಪ್ರಕರಣ: ನಾಗರಿಕ ಹಕ್ಕು ಸಮರ್ಥಕನಾಗಿ ಉತ್ತರಪ್ರದೇಶ ಸರ್ಕಾರವು 32ನೇ ವಿಧಿಯ ನೆರವು ಪಡೆಯಬಹುದು ಎಂದ ಎಸ್‌ಜಿ

"ನನ್ನ ರಾಜಕೀಯ ಬಾಂಧವ್ಯವು ವಿರೋಧ ಪಕ್ಷದೊಡನೆ ಇರುವುದರಿಂದ ನನ್ನನ್ನು ಗುರಿಯಾಗಿಸಲಾಗಿದೆ. ಪ್ರಕರಣದ ಸಹ ಆರೋಪಿಯನ್ನು ಎನ್‌ಕೌಂಟರ್‌ ಮಾಡಲಾಗಿದೆ" ಎಂದು ಅನ್ಸಾರಿ ಪರ ವಕೀಲ ಮುಕುಲ್ ರೋಹಟ್ಗಿ ವಾದಿಸಿದರು.
Mukhtar Ansari, Supreme Court
Mukhtar Ansari, Supreme Court

ಪಾತಕಲೋಕದ ಹಿನ್ನೆಲೆಯ ರಾಜಕಾರಣಿ, ಪ್ರಸ್ತುತ ಪ್ರಕರಣವೊಂದರ ಸಂಬಂಧ ಪಂಜಾಬ್‌ನ ರೋಪರ್‌ ಜೈಲಿನಲ್ಲಿ ಬಂಧಿಯಾಗಿರುವ ಆರೋಪಿ ಮುಖ್ತಾರ್ ಅನ್ಸಾರಿಯನ್ನು ಉತ್ತರಪ್ರದೇಶದ ಘಾಜಿಪುರ ಜೈಲಿಗೆ ವರ್ಗಾಯಿಸುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ.

ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಂವಿಧಾನದ 32 ನೇ ವಿಧಿಯ ನೆರವು ಪಡೆಯಲು ಸಾಧ್ಯವಿಲ್ಲ ಎಂಬ ವಾದಕ್ಕೆ ಉತ್ತರಪ್ರದೇಶ ಸರ್ಕಾರದ ಪರ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿರೋಧ ವ್ಯಕ್ತಪಡಿಸಿದರು. ಅನ್ಸಾರಿ ಅವರಿಂದಾದ ಮೂಲಭೂತ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದಂತೆ ಸರ್ಕಾರ ಜನತೆಯ ಪರವಾಗಿ ನಿಲ್ಲುತ್ತದೆ” ಎಂದು ವಾದಿಸಿದರು.

“ಸರ್ಕಾರ 32ನೇ ವಿಧಿಯಡಿ ಪರಿಹಾರ ಪಡೆಯಲಾಗದು ಎಂಬುದನ್ನು ಒಪ್ಪುವೆ. ಆದರೆ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಕನಾಗಿ 32ನೇ ವಿಧಿಯಡಿ ಈ ಹಕ್ಕನ್ನು ಸಮರ್ಥಿಸಿಕೊಳ್ಳಬಹುದಾಗಿದೆ. ಅಂತಹ ಪ್ರಕರಣಗಳಲ್ಲಿ ಸರ್ಕಾರ ಸಂತ್ರಸ್ತರ ನಿಲುವನ್ನು ಸಮರ್ಥಿಸಿ ಅವರ ಪರ ನಿಲ್ಲುತ್ತದೆ ಎಂದು ತೀರ್ಪೊಂದರಲ್ಲಿ ಉಲ್ಲೇಖಿಸಲಾಗಿದೆ. ಸಮುದಾಯ ಹಿತಾಸಕ್ತಿ ನಮ್ಮ ದೊಡ್ಡ ಜವಾಬ್ದಾರಿ” ಎಂದು ಸರ್ಕಾರದ ನಿಲುವನ್ನು ಮೆಹ್ತಾ ಸಮರ್ಥಿಸಿದರು.

Also Read
ಹಾಥ್‌ರಸ್ ಪ್ರಕರಣ: ಉತ್ತರಪ್ರದೇಶ ಪೊಲೀಸರಿಂದ ಸಿಬಿಐ ತೆಕ್ಕೆಗೆ ತನಿಖೆ

ಪಂಜಾಬ್‌ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ದುಷ್ಯಂತ್‌ ದವೆ, “ಅನ್ಸಾರಿ ಅವರು ಕೇವಲ ʼನಾಗರಿಕ ಅಪರಾಧಿʼಯಾಗಿದ್ದು ಅವರೊಂದಿಗೆ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ” ಎಂದರು. ಅಲ್ಲದೆ 32ನೇ ವಿಧಿ ಮತ್ತು ಸಿಆರ್‌ಪಿಸಿಯ ಸೆಕ್ಷನ್ 406 ರ ಅಡಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ಮನವಿ ಸಮರ್ಥನೀಯವಲ್ಲ ಎಂದು ಕೂಡ ಹೇಳಿದರು. ಅನ್ಸಾರಿ ಅವರ ಬಂಧನಕ್ಕೆ ಕಾರಣವಾದ ಸುಲಿಗೆಯ ಫೋನ್‌ ಕರೆ ನಿಜಕ್ಕೂ ಅನ್ಸಾರಿಯವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಧ್ವನಿ ಮಾದರಿಯನ್ನು ಪರೀಕ್ಷಿಸಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಹಿರಿಯ ವಕೀಲ ಮುಕುಲ್‌ ರೋಹಟ್ಗಿ, ಅನ್ಸಾರಿ ಪರ ವಾದಿಸುತ್ತಾ, "ನನ್ನ ರಾಜಕೀಯ ಬಾಂಧವ್ಯವು ವಿರೋಧ ಪಕ್ಷದೊಡನೆ ಇರುವುದರಿಂದ ನನ್ನನ್ನು ಗುರಿಯಾಗಿಸಲಾಗಿದೆ. ಪ್ರಕರಣದ ಸಹ ಆರೋಪಿಯನ್ನು ಎನ್‌ಕೌಂಟರ್‌ ಮಾಡಲಾಗಿದೆ" ಎಂದರು. ಪಂಜಾಬ್‌ ವಿರುದ್ಧ ಉತ್ತರಪ್ರದೇಶ ಕತ್ತಿ ಮಸೆಯುತ್ತಿದ್ದು ಸುಪ್ರೀಂಕೋರ್ಟನ್ನು ಬಳಸಿಕೊಂಡು ಆಕ್ರಮಣ ನಡೆಸಲು ನ್ಯಾಯಾಲಯ ಉತ್ತರಪ್ರದೇಶಕ್ಕೆ ಒಪ್ಪಿಗೆ ನೀಡಬಾರದು ಎಂದು ಅವರು ಹೇಳಿದರು. ಅನ್ಸಾರಿ ಅವರ ಅಲಭ್ಯತೆಯಿಂದಾಗಿ ವಿಚಾರಣೆ ವಿಳಂಬವಾಗುತ್ತಿದೆ ಎಂಬುದನ್ನು ಒಪ್ಪದ ರೋಹಟ್ಗಿ, "ಉತ್ತರ ಪ್ರದೇಶ ಹೂಡಿದ್ದ ಮೂರು ಮೊಕದ್ದಮೆಗಳಲ್ಲಿ ಅನ್ಸಾರಿ ಖುಲಾಸೆಗೊಂಡಿದ್ದಾರೆ. ಅವೆಲ್ಲವೂ ವರ್ಚುವಲ್‌ ವಿಧಾನದ ಮೂಲಕ ವಿಚಾರಣೆಗೊಳಪಟ್ಟಿದ್ದವು” ಎಂದು ವಿವರಿಸಿದರು.

ವಿಚಾರಣೆಯ ಅಂತಿಮ ದಿನವಾದ ಗುರುವಾರ ಹಿರಿಯ ವಕೀಲ ದವೆ ಅವರು ಅನ್ಸಾರಿ ಪ್ರಕರಣವನ್ನು ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಬಂಧನ ಘಟನೆಗೆ ಹೋಲಿಸಲು ಯತ್ನಿಸಿದರು. ಹಾಥ್‌ರಸ್ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ಹೋಗಿದ್ದ ಕೇರಳದ ಪತ್ರಕರ್ತ ಕಪ್ಪನ್‌ ಉತ್ತರಪ್ರದೇಶ ಪೊ‌ಲೀಸರಿಂದ ಬಂಧನಕ್ಕೊಳಗಾಗಿದ್ದರು.

Related Stories

No stories found.
Kannada Bar & Bench
kannada.barandbench.com