Mullaperiyar dam and Supreme Court
Mullaperiyar dam and Supreme Court 
ಸುದ್ದಿಗಳು

ಮುಲ್ಲಪೆರಿಯಾರ್ ಅಣೆಕಟ್ಟು ಸುರಕ್ಷಿತ; ಬಾಳಿಕೆ ಕುರಿತು ಕಾಲಮಿತಿ ನಿಗದಿಪಡಿಸಿಲ್ಲ: ಸುಪ್ರೀಂಕೋರ್ಟ್‌ಗೆ ತಮಿಳುನಾಡು

Bar & Bench

ಕೇರಳದ ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮುಲ್ಲಪೆರಿಯಾರ್ ಅಣೆಕಟ್ಟು ತಮಿಳುನಾಡಿನ ಐದು ಜಿಲ್ಲೆಗಳಿಗೆ ನೀರನ್ನು ಪೂರೈಸುತ್ತಿದ್ದು ಅದರ ರಚನೆ, ನೀರಿನ ಒತ್ತಡ ಹಾಗೂ ಭೂಕಂಪನದ ದೃಷ್ಟಿಯಿಂದ ಸುರಕ್ಷಿತವಾಗಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. (ಡಾ. ಜೋ ಜೋಸೆಫ್ ಮತ್ತು ತಮಿಳುನಾಡು ರಾಜ್ಯ ನಡುವಣ ಪ್ರಕರಣ).

ಸುಪ್ರೀಂಕೋರ್ಟ್‌ 2014ರಲ್ಲಿ ನೀಡಿದ್ದ ತೀರ್ಪಿನಂತೆ ಅಣೆಕಟ್ಟಿನ ನೀರಿನಮಟ್ಟವನ್ನು 142 ಅಡಿಗಳಿಗೆ ಹೆಚ್ಚಳ ಮಾಡಬೇಕಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರ ಸುರಕ್ಷತೆಯ ವಿಚಾರ ಎತ್ತುತ್ತಿದೆ ಎಂದು ತಮಿಳುನಾಡು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯಾತ್ಮಕ ಅಫಿಡವಿಟ್‌ನಲ್ಲಿ ತಿಳಿಸಿದೆ.

126 ವರ್ಷಗಳಷ್ಟು ಹಳೆಯದಾದ ಅಣೆಕಟ್ಟಿನ ಬಾಳಿಕೆ ಬಗ್ಗೆ ಕೇರಳ ಮಂಡಿಸಿದ ವಾದಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯಿಸಿರುವ ತಮಿಳುನಾಡು ಸರ್ಕಾರ, ಅಣೆಕಟ್ಟೊಂದರ ಬಾಳಿಕೆಗೆ ಸಂಬಂಧಿಸಿದಂತೆ ಯಾವುದೇ ಕಾಲಮಿತಿ ಇಲ್ಲ ಎಂದು 2012ರ ಸಬಲೀಕರಣ ಸಮಿತಿಯ ವರದಿ ಆಧರಿಸಿ ಹೇಳಿದೆ.

ಅಣೆಕಟ್ಟಿನ ಬಾಳಿಕೆ ಎಂಬುದು ಅದರ ನಿರ್ವಹಣೆ, ದುರಸ್ತಿ ಹಾಗೂ ಪುನರ್‌ಸ್ಥಾಪನೆ ಮೂಲಕ ಕಾಪಾಡುವ ಅದರ ಆರೋಗ್ಯ ಮತ್ತು ಆರೈಕೆಗೆ ಸಂಬಂಧಿಸಿದ್ದಾಗಿದೆ ಎಂದು ಸಬಕೀಕರಣ ಸಮಿತಿ ಹೇಳಿದೆ. ಅಣೆಕಟ್ಟಿನ ಬಾಳಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಮಿತಿ ಇಲ್ಲ” ಎಂದೂ ಅದು ಹೇಳಿದೆ.

126 ವರ್ಷಗಳಷ್ಟು ಹಳೆಯದಾದ ಅಣೆಕಟ್ಟು ತನ್ನ ರಚನೆಯ ದೃಷ್ಟಿಯಿಂದ ಅಸುರಕ್ಷಿತವಾಗಿದ್ದು, ಅದನ್ನು ಒಡೆದು ಹಾಕಿ ಹೊಸ ಅಣೆಕಟ್ಟು ನಿರ್ಮಿಸಬೇಕು ಎಂದು ಕೇರಳ ಸರ್ಕಾರದ ವಾದಿಸಿತ್ತು. ಅಣೆಕಟ್ಟಿಗೆ ಉಂಟಾಗುವ ಯಾವುದೇ ಧಕ್ಕೆ ಅದರ ಕೆಳ ಪ್ರದೇಶದಲ್ಲಿರುವ ಇಡುಕ್ಕಿ ಅಣೆಕಟ್ಟಿನ ಮೇಲೆ ಪರಿಣಾಮ ಬೀರಬಹುದು ಹಾಗೂ ಎರಡೂ ಅಣೆಕಟ್ಟುಗಳ ಜಂಟಿ ವೈಫಲ್ಯ 50 ಲಕ್ಷ ಜನರ ಜೀವ ಮತ್ತು ಅವರ ಆಸ್ತಿಪಾಸ್ತಿಗೆ ಮಾರಕವಾಗಬಹುದು ಎಂದು ಅದು ಹೇಳಿತ್ತು. ಕಳೆದ ಕೆಲ ವರ್ಷಗಳಿಂದ ಉಂಟಾಗುತ್ತಿರುವ ಹವಾಮಾನ ವೈಪರೀತ್ಯದಿಂದಾಗಿ ಉಂಟಾದ ಅನಿಯಮಿತ ಮಳೆ ಜಲಾಶಯದ ನೀರಿನ ಮಟ್ಟ ಹಠಾತ್ ಹೆಚ್ಚಳಕ್ಕೆ ಕಾರಣವಾದ ಉದಾಹರಣೆಗಳಿವೆ ಎಂದು ಕೂಡ ಕೇರಳ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಾದಿಸಿತ್ತು. ಇದಕ್ಕೆ ತಮಿಳುನಾಡು ಸರ್ಕಾರ ತಿರುಗೇಟು ನೀಡಿದ್ದು ಅದರ ವಾದದ ಪ್ರಮುಖಾಂಶಗಳು ಹೀಗಿವೆ:

  • ಸಣ್ಣ ಅಣೆಕಟ್ಟಿನ (ಬೇಬಿ ಡ್ಯಾಂ) ಕೆಳಪ್ರದೇಶದಲ್ಲಿ ಮರ ಕಡಿಯಲು ಅನುಮತಿಸದೆ ಹಾಗೂ ಘಾಟಿ ರಸ್ತೆ ದುರಸ್ತಿಗೊಳಿಸದೆ ಕೇರಳ ಸರ್ಕಾರ ಬೇಬಿ ಅಣೆಕಟ್ಟು ಮತ್ತು ಮೂಲ ಅಣೆಕಟ್ಟಿನ ಸಮತೋಲನ ಬಲಪಡಿಸುವ ಕಾಮಗಾರಿಗೆ ಅಡ್ಡಿಪಡಿಸುತ್ತಿದೆ.

  • ಅನಿಯಮಿತ ಮಳೆಯಿಂದಾಗಿ ಅಣೆಕಟ್ಟಿನ ನೀರಿನ ಮಟ್ಟ ಹಠಾತ್‌ ಏರಿಕೆಯಾಗುತ್ತಿದೆ ಎಂದು ಕೇರಳ ವಾದಿಸಿದ್ದರೂ ಅದಕ್ಕೆ ಸಂಬಂಧಿಸಿದ ನಿರ್ದಿಷ್ಟ ವಿವರಗಳನ್ನು ಅದು ಒದಗಿಸಿಲ್ಲ. ಅಲ್ಲದೆ ಮುಲ್ಲಪೆರಿಯಾರ್‌ ಅಣೆಕಟ್ಟು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿದೆ. ಇಡುಕ್ಕಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 3310 ಮಿ.ಮೀ. ಮಳೆಯಾದರೆ ಪೆರಿಯಾರ್ ಅಣೆಕಟ್ಟು ಪ್ರದೇಶದಲ್ಲಿ ವಾರ್ಷಿಕ ಮಳೆ ಕೇವಲ 2080 ಮಿ.ಮೀ ಮಳೆಯಾಗುತ್ತದೆ.

  • ಮುಲ್ಲಪೆರಿಯಾರ್‌ ಅಣೆಕಟ್ಟು ಭೂ ಕಂಪನ ವಲಯ III ರಲ್ಲಿ ಬರುತ್ತದೆ. ಆದರೆ ಉತ್ತರಾಖಂಡವು IV ಮತ್ತು Vನೇ ವಲಯದಲ್ಲಿ ಬರುತ್ತದೆ. ಹೀಗಾಗಿ ಉತ್ತರಾಖಂಡದ ರೀತಿಯ ಪ್ರವಾಹ ಇಲ್ಲಿ ಉಂಟಾಗುತ್ತದೆ ಎನ್ನುವ ತಮಿಳುನಾಡು ವಾದ ಅಪ್ರಸ್ತುತ. ಇದನ್ನು ಸಬಲೀಕರಣ ಸಮಿತಿಯ ಮುಂದೆ ಕೇರಳ ಹೇಳಿದಾಗಲೂ ಸಮಿತಿ ಒಪ್ಪಿರಲಿಲ್ಲ. ಕೇರಳ ಸರ್ಕಾರ ನ್ಯಾಯಾಲಯದ ದಿಕ್ಕುತಪ್ಪಿಸುತ್ತಿದ್ದು ವಿಚಾರಗಳನ್ನು ಉತ್ಪ್ರೇಕ್ಷಿಸುತ್ತಿದೆ.