ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ 126 ವರ್ಷಗಳಷ್ಟು ಹಳೆಯ ಮುಲ್ಲಪೆರಿಯಾರ್ ಅಣೆಕಟ್ಟಿಗೆ ಉಂಟಾಗುವ ಯಾವುದೇ ಧಕ್ಕೆ ಅದರ ಕೆಳ ಪ್ರದೇಶದಲ್ಲಿರುವ ಇಡುಕ್ಕಿ ಅಣೆಕಟ್ಟಿನ ಮೇಲೆ ಪರಿಣಾಮ ಬೀರಬಹುದು ಹಾಗೂ ಎರಡೂ ಅಣೆಕಟ್ಟುಗಳ ಜಂಟಿ ವೈಫಲ್ಯ 50 ಲಕ್ಷ ಜನರ ಜೀವ ಮತ್ತು ಅವರ ಆಸ್ತಿಪಾಸ್ತಿಗೆ ಮಾರಕವಾಗಬಹುದು ಎಂದು ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಕಳೆದ ಕೆಲ ವರ್ಷಗಳಿಂದ ಉಂಟಾಗುತ್ತಿರುವ ಹವಾಮಾನ ವೈಪರೀತ್ಯದಿಂದಾಗಿ ಉಂಟಾದ ಅನಿಯಮಿತ ಮಳೆ ಜಲಾಶಯದ ನೀರಿನ ಮಟ್ಟ ಹಠಾತ್ ಹೆಚ್ಚಳಕ್ಕೆ ಕಾರಣವಾದ ಉದಾಹರಣೆಗಳಿವೆ ಎಂದು ಕೂಡ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.
ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನಮಟ್ಟವನ್ನು ಹೆಚ್ಚಳ ಮಾಡಿದರೆ ಅದರಿಂದ ಬಿಡುಗಡೆಯಾಗುವ ನೀರು ಈಗಾಗಲೇ ತುಂಬಿರುವ ಇಡುಕ್ಕಿ ಅಣೆಕಟ್ಟಿನ ಮೇಲೆ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್ ಮುಲ್ಲಪೆರಿಯಾರ್ ಮತ್ತು ಇಡುಕ್ಕಿ ಅಣೆಕಟ್ಟುಗಳ ಜಂಟಿ ವೈಫಲ್ಯವೇನಾದರೂ ಉಂಟಾದರೆ ಊಹೆಗೂ ಮೀರಿದ ದುರಂತ ಸಂಭವಿಸಲಿದ್ದು ಇಡುಕ್ಕಿ ಅಣೆಕಟ್ಟಿನ ಕೆಳ ಪ್ರದೇಶದಲ್ಲಿ ವಾಸಿಸುವ 50 ಲಕ್ಷ ಜನರ ಜೀವ ಮತ್ತು ಆಸ್ತಿಪಾಸ್ತಿ ಮೇಲೆ ಪರಿಣಾಮ ಬೀರುತ್ತದೆ” ಎಂದು ಅಫಿಡವಿಟ್ ತಿಳಿಸಿದೆ. ಹಾಗಾಗಿ ಪ್ರಸ್ತುತ ಇರುವ ಗರಿಷ್ಠ 142 ಅಡಿಗಳ ಮಿತಿಯನ್ನು ಕಡಿಮೆಗೊಳಿಸುವಂತೆ ಅದು ನ್ಯಾಯಾಲಯವನ್ನು ಕೋರಿದೆ.
“ಕೇರಳದಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯ ನಿದರ್ಶನಗಳು ಮತ್ತು ನಿರ್ದಿಷ್ಟವಾಗಿ ಮುಲ್ಲಪೆರಿಯಾರ್ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ (ಅದರಲ್ಲಿಯೂ 2018 ಮತ್ತು 2019 ರಲ್ಲಿ ಬಿದ್ದ ಮಳೆಯನ್ನು ಗಮನಿಸಿ) ಹಾಗೂ ಅದರ ಪರಿಣಾಮವಾಗಿ ಜಲಾಶಯಮಟ್ಟದಲ್ಲಿ ದಿಢೀರ್ ಏರಿಕೆಯಾಗುತ್ತಿರುವುದನ್ನು ಗಮನಿಸಿದಾಗ ಮಳೆಯ ಮಾದರಿಯಲ್ಲಿ ಮತ್ತು ಪ್ರವಾಹದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ತಮಿಳುನಾಡು ಕೋರಿಕೆಯಂತೆ ಸೆಪ್ಟೆಂಬರ್ 20 ರಂದು ನಿಗದಿಪಡಿಸಲಾಗಿರುವ 142 ಅಡಿಗಳ ಗರಿಷ್ಠ ಮಿತಿಯ ಕುರಿತು ಮರುಪರಿಶೀಲನೆ ನಡೆಸಬೇಕು” ಎಂದು ಅದು ನ್ಯಾಯಾಲಯವನ್ನು ಕೋರಿದೆ.
ದೀರ್ಘಾವಧಿ ಕ್ರಮವಾಗಿ ಅಣೆಕಟ್ಟಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಅದರ ಕೆಳವಲಯದಲ್ಲಿ ನೂತನ ಅಣೆಕಟ್ಟು ನಿರ್ಮಿಸಬೇಕು ಎಂದು ಕೇರಳ ಸರ್ಕಾರ ಕೋರಿದೆ. ಜಲಾಶಯದ ನೀರಿನ ಮಟ್ಟ 139 ಅಡಿ ಮೀರದಂತೆ ನೋಡಿಕೊಳ್ಳಲು ತಾನು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ಸುಪ್ರೀಂಕೋರ್ಟ್ 2014ರಲ್ಲಿ ನೀಡಿದ ತೀರ್ಪಿನ ವೇಳೆ ಜಲಾಶಯದ ನೀರಿನ ಮಟ್ಟವನ್ನು 142 ಅಡಿಗೆ ನಿಗದಿಪಡಿಸಿತ್ತು. ಆದರೆ ಕೇರಳದಲ್ಲಿ ತೀವ್ರ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ನೀರಿನ ಮಟ್ಟ ಅಣೆಕಟ್ಟಿನ 139 ಅಡಿ ಇರುವಂತೆ ನೋಡಿಕೊಳ್ಳಲು 2018ರಲ್ಲಿ ಸೂಚಿಸಿತ್ತು.
ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ತನ್ನ ಈಗಿನ ಮನವಿಯಲ್ಲಿ ಇದೇ ರೀತಿಯ ನಿರ್ದೇಶನ ನೀಡುವಂತೆ ಕೋರಿತ್ತು. ಅಕ್ಟೋಬರ್ 25ರಂದು ಸುಪ್ರೀಂಕೋರ್ಟ್ ನೀಡಿದ್ದ ಸೂಚನೆಯಂತೆ ನೇಮಕವಾಗಿದ್ದ ತಜ್ಞರ ಸಮಿತಿ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ಸೂಚಿಸಿತ್ತು. ಆದರೆ ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಕೇರಳ ಸರ್ಕಾರ ನ್ಯಾಯಾಲಯದಲ್ಲಿ ತನ್ನ ಕಳವಳ ವ್ಯಕ್ತಪಡಿಸಿತ್ತು. ಜೊತೆಗೆ ಈ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವುದಾಗಿ ತಿಳಿಸಿತ್ತು.