ಹನ್ಸ್ ಸಂಶೋಧನಾ ಸಮೂಹ ಮತ್ತು ಪ್ರಸಾರ ಪ್ರೇಕ್ಷಕ ಸಂಶೋಧನಾ ಸಮಿತಿಯ (ಬಾರ್ಕ್) ಆಂತರಿಕ ವರದಿಯನ್ನು ಬಹಿರಂಗಪಡಿಸಿದ್ದಕ್ಕೆ ಸಂಬಂಧಿಸಿದಂತೆ ಎಆರ್‌ಜಿ ಔಟ್ಲಯರ್ (ರಿಪಬ್ಲಿಕ್ ಟಿವಿಯ ಮಾತೃ ಸಂಸ್ಥೆ) ಮತ್ತು ಅರ್ನಾಬ್ ಗೋಸ್ವಾಮಿ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾಜ್ಞೆ ನೀಡಲು ಮುಂಬೈ ಸಿಟಿ ಸಿವಿಲ್ ನ್ಯಾಯಾಲಯ ಈಚೆಗೆ ನಿರಾಕರಿಸಿದೆ.
ಹನ್ಸ್ ಸಂಶೋಧನಾ ಸಮೂಹದ ಮನವಿಯನ್ನು ನಿರಾಕರಿಸಿರುವ ನಗರ ಸಿವಿಲ್ ನ್ಯಾಯಾಧೀಶ ಸಿ ವಿ ಮರಾಠೆ ಅವರು ಹೀಗೆ ಹೇಳಿದ್ದಾರೆ:
ಹನ್ಸ್ ವರದಿಯನ್ನು ಪ್ರತಿವಾದಿಗಳು ಬಹಿರಂಗಪಡಿಸಿರುವುದರಿಂದ ಯಾವ ರೀತಿಯಲ್ಲಿ ಸರಿಪಡಿಸಲಾಗದ ನಷ್ಟ ಅಥವಾ ಪೂರ್ವಾಗ್ರಹದ ಸಮಸ್ಯೆಗಳು ಉಂಟಾಗಿದೆ ಎಂಬುದನ್ನು ಮೇಲ್ನೋಟಕ್ಕಾದರೂ ಸಾಬೀತುಪಡಿಸಲು ಫಿರ್ಯಾದುದಾರರು ವಿಫಲರಾಗಿದ್ದಾರೆ. ಒಮ್ಮೆ ದಾಖಲೆ/ವಿಷಯವು ಸಾರ್ವಜನಿಕಗೊಂಡ ಮೇಲೆ ಅದು ಮಾಧ್ಯಮಗಳ ಪ್ರತಿಕ್ರಿಯೆಯ ನ್ಯಾಯಸಮ್ಮತ ವಿಷಯವಾಗುತ್ತದೆ. ಪ್ರತಿವಾದಿಗಳ ವಿರುದ್ಧ ಫಿರ್ಯಾದುದಾರರು ಮಾಡಿರುವ ಆರೋಪದಲ್ಲಿ ಹುರುಳಿಲ್ಲವಾದುದರಿಂದ ಮಧ್ಯಂತರ ಪರಿಹಾರ ಕೋರಿರುವ ಮನವಿಯನ್ನು ವಜಾಗೊಳಿಸಲಾಗಿದೆ.”ಮುಂಬೈ ನಗರ ಸಿವಿಲ್ ನ್ಯಾಯಾಲಯ
ರಿಪಬ್ಲಿಕ್ ಟಿವಿಯಲ್ಲಿ ಆಂತರಿಕ ವರದಿಯನ್ನು ಬಹಿರಂಗಪಡಿಸಿದ್ದರಿಂದ ಆಗಿರುವ ಹಾನಿ ಮತ್ತು ವರ್ಚಸ್ಸಿಗೆ ಆಗಿರುವ ನಷ್ಟವನ್ನು ಸಾಬೀತುಪಡಿಸುವಲ್ಲಿ ಹನ್ಸ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಕೇವಲ ಹೇಳಿಕೆ ನೀಡುವುದರಿಂದ ಹಾನಿಯ ಮೊತ್ತ ನಿರ್ಧರಿಸುವುದು, ಫಿರ್ಯಾದುದಾರರ ಪ್ರತಿಷ್ಠೆಗೆ ಹೇಗೆ ಧಕ್ಕೆಯಾಗಿದೆ ಎಂದು ಹೇಳಲಾಗದು. ಪ್ರತಿವಾದಿಗಳ ಸುದ್ದಿ ವಾಹಿನಿಯಲ್ಲಿ (ರಿಪಬ್ಲಿಕ್ ಟಿವಿ) ಹನ್ಸ್ ವರದಿಯನ್ನು ಪ್ರಸಾರ ಮಾಡಿದ್ದರಿಂದ ಫಿರ್ಯಾದುದಾರರಿಗೆ ಯಾವ ರೀತಿಯ ನಷ್ಟವಾಗಿದೆ ಎಂದು ಹೇಳಲಾಗದು” ಎಂದು ಪೀಠ ಹೇಳಿದೆ.
ತನ್ನ ಬೆಂಬಲಕ್ಕಿರುವ ವರದಿಗಳನ್ನು ತೋರ್ಪಡಿಸುವ ಮೂಲಕ ಟಿಆರ್‌ಪಿ ತಿರುಚಿರುವ ಆರೋಪವನ್ನು ನಿರಾಕರಿಸಿ, ಆ ಮೂಲಕ ತಾನು ಮುಗ್ಧ ಎಂದು ಸಮರ್ಥಿಸಿಕೊಳ್ಳುವ ಕೆಲಸವನ್ನು ರಿಪಬ್ಲಿಕ್ ಟಿವಿ ಮಾಡಿರುವುದು ಸಹಜವಾಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು. ಅಲ್ಲದೆ, ಸಂವಹನದ ಗೌಪ್ಯತೆಗೆ ಸಂಬಂಧಿಸಿದ ತನ್ನ ಮತ್ತು ಬಾರ್ಕ್ ನಡುವೆ ಅಗಿರುವ ಗೋಪ್ಯತಾ ಒಪ್ಪಂದದ ಯಾವುದೇ ದಾಖಲೆಗಳನ್ನೂ ಹನ್ಸ್ ಸಲ್ಲಿಸಿಲ್ಲ ಎನ್ನುವ ಅಂಶವನ್ನೂ ನ್ಯಾಯಾಲಯವು ಪರಿಗಣಿಸಿತು.
ಮೂರನೇ ವ್ಯಕ್ತಿಯೊಂದಿಗೆ ಯಾವುದೇ ದಾಖಲೆಯನ್ನು ಹಂಚಿಕೊಳ್ಳುವಂತಿಲ್ಲ ಎಂದು ಹನ್ಸ್ ಜೊತೆ ಕರಾರು ಒಪ್ಪಂದವಾಗಿದೆ. ಸುದ್ದಿ ಪ್ರಸಾರದ ವೇಳೆ ಅವುಗಳನ್ನು ಬಹಿರಂಗಗೊಳಿಸುವುದರಿಂದ ಹನ್ಸ್ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಹನ್ಸ್ ವಕೀಲ ಎನ್ ಡಿ ಜಯವಂತ್ ವಾದಿಸಿದರು.
ಬಾರ್ಕ್ ಅನ್ನು ಪ್ರತಿವಾದಿಯನ್ನಾಗಿ ಮಾಡದಿರುವುದರಿಂದ ಖಾಸಗಿ ಹಕ್ಕನ್ನು ಒಬ್ಬರಿಗೆ ಕಲ್ಪಿಸಲಾಗದು. ಹನ್ಸ್ ವರದಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಅದು ಹಲವು ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುವಾಗ ಪ್ರತಿವಾದಿಗಳು ಅದನ್ನು ಬಳಸದಂತೆ ತಡೆಹಿಡಿಯಲಾಗದು ಎಂದು ಎಆರ್‌ಜಿ ಔಟ್ಲಯರ್ ಮತ್ತು ಗೋಸ್ವಾಮಿ ಪರ ಫೀನಿಕ್ಸ್ ಲೀಗಲ್‌ನ ಪಿ ಡಿ ಗಾಂಧಿ ವಾದಿಸಿದರು.
ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುತ್ತಿದ್ದಂತೆ ರಿಪಬ್ಲಿಕ್ ಟಿವಿಯು ಕಾರ್ಯಕ್ರಮದಲ್ಲಿ ಹನ್ಸ್ ವರದಿಯನ್ನು ಬಹಿರಂಗಪಡಿಸಿತ್ತು.