ಟಿಆರ್‌ಪಿ ಹಗರಣ: ನ.5ರವರೆಗೆ ಅರ್ನಾಬ್‌ ಬಂಧನ ಸಾಧ್ಯತೆ ಇಲ್ಲ ಎಂದ ಬಾಂಬೆ ಹೈಕೋರ್ಟ್‌

ಯಾವುದೇ ತುರ್ತು ಸಂದರ್ಭ ಇದ್ದಲ್ಲಿ, ಅದನ್ನು ಬಾಂಬೆ ಹೈಕೋರ್ಟ್‌ ಜೊತೆ ಹಂಚಿಕೊಳ್ಳುವ ಸ್ವಾತಂತ್ರ್ಯ ರಿಪಬ್ಲಿಕ್ ಟಿವಿಗೆ ಇದೆ ಎಂದು ಬಾಂಬೆ ಹೈಕೋರ್ಟ್‌ ವಿಚಾರಣೆ ವೇಳೆ ಮೌಖಿಕವಾಗಿ ತಿಳಿಸಿದೆ.
ಟಿಆರ್‌ಪಿ ಹಗರಣ: ನ.5ರವರೆಗೆ ಅರ್ನಾಬ್‌ ಬಂಧನ ಸಾಧ್ಯತೆ ಇಲ್ಲ ಎಂದ ಬಾಂಬೆ ಹೈಕೋರ್ಟ್‌
Republic TV, TRP Scam

ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ (ಟಿಆರ್‌ಪಿ) ಮಾಹಿತಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ನವೆಂಬರ್‌ 5ರವರೆಗೆ ಬಂಧಿಸುವ ಸಾಧ್ಯತೆ ಇಲ್ಲ ಎಂದು ಬಾಂಬೆ ಹೈಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ಗೋಸ್ವಾಮಿ ಅವರನ್ನು ಆರೋಪಿ ಎಂದು ಹೆಸರಿಸಿದರೆ, ಅವರಿಗೆ ಮುಂಬೈ ಪೊಲೀಸರು ಮೊದಲು ಸಮನ್ಸ್ ಜಾರಿಗೊಳಿಸಲಿದ್ದಾರೆ ಎಂಬುದನ್ನು ಅಧಿಕೃತವಾಗಿ ಪರಿಗಣಿಸಿದ ನ್ಯಾಯಾಲಯ ಮೇಲಿನಂತೆ ಅಭಿಪ್ರಾಯಪಟ್ಟಿತು.

Also Read
ಟಿಆರ್‌ಪಿ ಹಗರಣ: ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮಾಲೀಕರ ಬಂಧನ; ರಿಪಬ್ಲಿಕ್ ಟಿವಿ ವಿಚಾರಣೆ ಮಾಡಲಿರುವ ಮುಂಬೈ ಪೊಲೀಸ್

ವಾಹಿನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ʼಮುಂಬೈ ಪೊಲೀಸರು ರಿಪಬ್ಲಿಕ್‌ ಟಿವಿ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿರುವುದರಿಂದ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಬೇಕುʼ ಎಂದು ಕೋರಿದರು. ಮಹಾರಾಷ್ಟ್ರ ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ʼಯಾವುದೇ ದುರುದ್ದೇಶಪೂರ್ವಕ ಕ್ರಮ ಕೈಗೊಂಡಿಲ್ಲ ಅಲ್ಲದೆ ತನಿಖೆ ಆರಂಭಿಕ ಹಂತದಲ್ಲಿ ಇರುವುದರಿಂದ ಮಧ್ಯಂತರ ಪರಿಹಾರದ ಅಗತ್ಯವೂ ಇಲ್ಲʼ ಎಂದು ವಾದಿಸಿದರು.

ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ಣಿಕ್ ಅವರಿದ್ದ ನ್ಯಾಯಪೀಠ ಮುಂಬೈ ಪೊಲೀಸರು ಎಫ್ಐಆರ್‌ನಲ್ಲಿ ರಿಪಬ್ಲಿಕ್ ಟಿವಿಯನ್ನು ಇನ್ನೂ ಆರೋಪಿಗಳನ್ನಾಗಿ ಮಾಡಿಲ್ಲ ಎಂಬುದನ್ನು ಗಮನಿಸಿದರು. ಕಪಿಲ್ ಸಿಬಲ್ ಅವರು ಕೂಡ ರಿಪಬ್ಲಿಕ್ ಟಿವಿಯ ಅರ್ಜಿ ಸಕಾಲಿಕವಲ್ಲ ಎಂದು ವಾದಿಸುವಾಗ ಈ ಅಂಶವನ್ನು ಎತ್ತಿ ತೋರಿಸಿದರು.

Also Read
ಟಿಆರ್‌ಪಿ ಹಗರಣ: ಮುಂಬೈ ಪೊಲೀಸ್ ಸಮನ್ಸ್ ಪ್ರಶ್ನಿಸಿ ‘ಸುಪ್ರೀಂ’ ಮೊರೆಹೋದ ರಿಪಬ್ಲಿಕ್ ಟಿವಿ

"ಎಫ್ಐಆರ್‌ನಲ್ಲಿ ರಿಪಬ್ಲಿಕ್ ಟಿವಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹೀಗಾಗಿ ಅದನ್ನು ಹೇಗೆ ರದ್ದುಗೊಳಿಸಲು ಸಾಧ್ಯ? ಎಫ್ಐಆರ್ ಅಪರಾಧಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ, ಇದಕ್ಕೆ ಸಂಬಂಧಿಸಿದಂತೆ ಹಲವಾರು ಅಕ್ರಮಗಳು ಕಂಡುಬರುತ್ತವೆ. ಆ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ," ಎಂದು ಸಿಬಲ್ ವಾದಿಸಿದರು.

ಆದರೂ ಪ್ರಕರಣ ದುರುದೇಶಪೂರ್ವಕವಾಗಿದೆ ಎಂದು ಸಾಳ್ವೆ ಅಭಿಪ್ರಾಯಪಟ್ಟರು. ಮುಂಬೈ ಪೊಲೀಸ್ ಆಯುಕ್ತರು ಪತ್ರಿಕಾ ಸಂದರ್ಶನವೊಂದರಲ್ಲಿ ನಿರ್ದಿಷ್ಟವಾಗಿ ರಿಪಬ್ಲಿಕ್ ಟಿವಿ ವಿರುದ್ಧ ಆರೋಪ ಮಾಡಿರುವುದು ಇದನ್ನು ಎತ್ತಿ ತೋರಿಸುತ್ತದೆ ಎಂದರು.

Also Read
[ಬ್ರೇಕಿಂಗ್] ಟಿಆರ್‌ಪಿ ಹಗರಣ: ಸಮನ್ಸ್ ಪ್ರಶ್ನಿಸಿ 'ಸುಪ್ರೀಂ'‌ ನಲ್ಲಿ ರಿಪಬ್ಲಿಕ್‌ ಟಿವಿ ಸಲ್ಲಿಸಿದ್ದ ಅರ್ಜಿ ವಜಾ

ಪತ್ರಿಕಾ ಸಂದರ್ಶನದಲ್ಲಿ ಗೋಸ್ವಾಮಿ ಅವರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ ಮತ್ತು ರಿಪಬ್ಲಿಕ್ ಟಿವಿಯನ್ನು ಮಾತ್ರ ಪ್ರಸ್ತಾಪಿಸಲಾಗಿದೆ ಎಂದು ಸಿಬಲ್ ಪ್ರತಿಪಾದಿಸಿದರು. ಈ ಮಾತಿಗೆ ಸಾಳ್ವೆ ತೀವ್ರವಾಗಿ ಪ್ರತಿಕ್ರಿಯಿಸಿದರು:

“ರಿಪಬ್ಲಿಕ್‌ ಟಿವಿ ಕೆಟ್ಟ ಕಾರ್ಯಕ್ರಮ ಪ್ರಸಾರ ಮಾಡಿದರೆ ಅರ್ನಾಬ್‌ ಅವರನ್ನು ದೂಷಿಸಲಾಗುತ್ತದೆ. ಆದರೆ ರಿಪಬ್ಲಿಕ್‌ ಟಿವಿ ಮೇಲೆ ಆರೋಪ ಬಂದರೆ ಅರ್ನಾಬ್‌ ಯಾರು ಎಂದು ಪ್ರಶ್ನಿಸಲಾಗುತ್ತದೆ. ತುಂಬಾ ಚೆನ್ನಾಗಿದೆ!
- ಹರೀಶ್‌ ಸಾಳ್ವೆ, ರಿಪಬ್ಲಿಕ್‌ ಟಿವಿ ಪರ ವಕೀಲ

ಆದರೂ, ಸಿಬಲ್ ಈ ವಿಷಯದಲ್ಲಿ ಯಾವುದೇ ಮಧ್ಯಂತರ ಪರಿಹಾರ ನೀಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು. ಈ ವಿಷಯದಲ್ಲಿ ಗೋಸ್ವಾಮಿ ಅವರಿಗೆ ಸಮನ್ಸ್ ಜಾರಿಗೊಳಿಸಿದರೆ, ಅವರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ದಾಖಲಿಸಲು ಮಾತ್ರ ನ್ಯಾಯಾಲಯ ಮುಂದಾಗಬಹುದು ಎಂದು ಅವರು ಹೇಳಿದರು.

ಅಂತಹ ಸನ್ನಿವೇಶದಲ್ಲಿ, ಗೋಸ್ವಾಮಿ ಅವರನ್ನು ಬಂಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಸಮನ್ಸ್ ಜಾರಿಗೊಳಿಸಿದರೆ, ಅರ್ಜಿದಾರರು ಅಧಿಕಾರಿಗಳೊಂದಿಗೆ ಸಹಕರಿಸುತ್ತಾರೆ ಎಂದು ಸಾಳ್ವೆ ಅವರು ಹೇಳಿದ್ದನ್ನು ದಾಖಲಿಸಿತು.

ತನಿಖಾ ದಾಖಲೆಗಳನ್ನು ನ್ಯಾಯಾಲಯದ ಪರಿಶೀಲನೆಗಾಗಿ ನವೆಂಬರ್ 4ರೊಳಗೆ ಸಲ್ಲಿಸುವಂತೆ ನ್ಯಾಯಪೀಠ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಪ್ರಕರಣ ನವೆಂಬರ್ 5 ರಂದು ವಿಚಾರಣೆಗೆ ಬರಲಿದೆ.

ಸಾಳ್ವೆ ಮತ್ತು ಸಿಬಲ್‌ ನಡುವೆ ನಡೆದ ವಾದ- ಪ್ರತಿವಾದದ ವೇಳೆ ಹಲವು ಆಸಕ್ತಿಕರ ವಿಷಯಗಳು ಕಂಡುಬಂದವು.

ಸಾಳ್ವೆ ವಾದದ ಝರಿ…

  • ಎಫ್‌ಐಆರ್‌ನಲ್ಲಿ ಸೆಕ್ಷನ್‌ 420 (ವಂಚನೆಯನ್ನು ಉಲ್ಲೇಖಿಸುವ ಐಪಿಸಿ ಸೆಕ್ಷನ್)‌ ಅಡಿ ಪ್ರಕರಣ ದಾಖಲಿಸಲಾಗಿದೆ. ಅದು ಹೇಗೆ 420 ಆಗುತ್ತದೆ ಎಂಬುದು ದೇವರಿಗೇ ಗೊತ್ತು! ಯಾರಿಗೆ ವಂಚನೆ ಮಾಡಲಾಗಿದೆ?

  • ಇಡೀ ಪ್ರಕರಣ ತೆಳು ಪೋಷಾಕಿನಲ್ಲಿದೆ. ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ.

  • ದುರುದ್ದೇಶ ಇರುವುದು ಮುಂಬೈ ಪೊಲೀಸ್‌ ಆಯುಕ್ತರ ಸಂದರ್ಶನದ ಮೂಲಕವೇ ಗೊತ್ತಾಗುತ್ತದೆ. ಅವರು ನನ್ನ ಕಕ್ಷೀದಾರರನ್ನು ಹೇಗೆ ನಡೆಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ನನಗೆ ನಿಜವಾಗಿಯೂ ಆತಂಕ ಇದೆ.

ಕಪಿಲ್‌ ವಾದದ ಸರಣಿ…

  • ಕ್ರಿಮಿನಲ್‌ ಪ್ರಕರಣವೊಂದರಲ್ಲಿ ದೊರೆಯುವ ವಸ್ತುಗಳು ಪ್ರಸ್ತುತವಾಗುತ್ತವೆ. ಆ ವಸ್ತು ಇನ್ನೂ ಪತ್ತೆಯಾಗಿಲ್ಲ ಮತ್ತು ನ್ಯಾಯಾಲಯಕ್ಕೆ ಅದನ್ನು ಒಪ್ಪಿಸಿಲ್ಲ. ಹೀಗಿರುವಾಗ ಈ ಹಂತದಲ್ಲಿ ಹೇಗೆ ದುರುದ್ದೇಶ ನಡೆಯುತ್ತದೆ?

  • ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ನನಗೆ ಅನ್ನಿಸುವುದಿಲ್ಲ. ತನಿಖೆ ನಡೆಯುತ್ತಿದೆ. ಅನೇಕ ವಾಹಿನಿಗಳು ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಇರುತ್ತದೆ. ವಿವಿಧ ಹಂತಗಳಲ್ಲಿ ಇದು ನಡೆಯುತ್ತಿರಬಹುದು. ಇದನ್ನು ಸ್ವಲ್ಪ ತನಿಖೆ ಮಾಡಬೇಕಿದೆ.

  • ಅರ್ನಾಬ್‌ ಕೂಡ ಸಾಮಾನ್ಯ ನಾಗರಿಕ. ಮಾಧ್ಯಮದ ಸದಸ್ಯ ಎಂಬ ಕಾರಣಕ್ಕೆ ಅವರಿಗೆ ವಿಶೇಷ ವಿನಾಯಿತಿಗಳೇನೂ ಇರುವುದಿಲ್ಲ. ಅವರ ವಿರುದ್ಧ ಪುರಾವೆಗಳು ಇದ್ದರೆ ಅದು ಹೇಗೆ ದುರುದ್ದೇಶ ಪೂರ್ವಕವಾಗುತ್ತದೆ?

Related Stories

No stories found.
Kannada Bar & Bench
kannada.barandbench.com