Tablighi Jamaat 
ಸುದ್ದಿಗಳು

ಆದೇಶ ಉಲ್ಲಂಘನೆ ಸಾಬೀತಿಗೆ ಸಾಕ್ಷ್ಯಗಳಿಲ್ಲ: 20 ವಿದೇಶಿ ತಬ್ಲೀಘಿ ಜಮಾತ್ ಆಹ್ವಾನಿತರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಭಾರತೀಯ ದಂಡ ಸಂಹಿತೆಯ ಅಡಿ ಆರೋಪಿಗಳು ಎದುರಿಸುತ್ತಿದ್ದ ಕೊಲೆ ಯತ್ನ ಮತ್ತು ಮಾನವ ಹತ್ಯೆಯಂತಹ ಗಂಭೀರ ಆರೋಪಗಳನ್ನು ಮುಂಬೈನ ಸೆಷನ್ಸ್‌ ನ್ಯಾಯಾಲಯವು ಈ ಹಿಂದೆಯೇ ತೆರವುಗೊಳಿಸಿತ್ತು.

Bar & Bench

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಬಾಂಬೆ ಪೊಲೀಸ್‌ ಕಾಯಿದೆಯ ಸೆಕ್ಷನ್‌ 135ರ ಅಡಿ ಆರೋಪಿಗಳಾಗಿದ್ದ 20 ವಿದೇಶಿ ತಬ್ಲೀಘಿ ಜಮಾತ್‌ ಆಹ್ವಾನಿತರನ್ನು ಮುಂಬೈ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸೋಮವಾರ ಖುಲಾಸೆಗೊಳಿಸಿದೆ.

ಅಂಧೇರಿ ನ್ಯಾಯಾಲಯದಲ್ಲಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆಗಿರುವ ಆರ್‌ ಆರ್‌ ಖಾನ್‌ ಅವರು ಈ ಕುರಿತ ತಮ್ಮ ಆದೇಶದಲ್ಲಿ ಹೀಗೆ ಹೇಳಿದ್ದಾರೆ:

“ಆರೋಪಿಗಳು ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಬಾಂಬೆ ಪೊಲೀಸ್ ಕಾಯಿದೆಯ ಸೆಕ್ಷನ್ 37 ರ ಅಡಿಯಲ್ಲಿ ಆರೋಪಿಗಳು ಕಾನೂನುಬದ್ಧವಾದ ಅಧಿಸೂಚನೆಯನ್ನು ಉಲ್ಲಂಘಿಸಿದ್ದಾರೆ ಎಂದು ತೋರಿಸಲು ಪ್ರಾಸಿಕ್ಯೂಷನ್‌ ಬಳಿ ಯಾವುದೇ ಪುರಾವೆಗಳಿಲ್ಲ.”
ಅಂಧೇರಿ ನ್ಯಾಯಾಲಯ

ವಿದೇಶಿ ಕಾಯಿದೆ, ಸಾಂಕ್ರಾಮಿಕ ರೋಗಗಳ ಕಾಯಿದೆ ಮತ್ತು ವಿಪತ್ತು ನಿರ್ವಹಣಾ ಕಾಯಿದೆ ಒಳಗೊಂಡಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 188 (ಸಾರ್ವಜನಿಕ ಅಧಿಕಾರಿಯ ಆದೇಶಕ್ಕೆ ಅಸಹಕಾರ), 269 ಮತ್ತು 270 (ಭಯಾನಕ ರೋಗದ ಸೋಂಕು ಹರಡುವ ಯತ್ನ) ಅಡಿ ದೂರು ದಾಖಲಿಸಲಾಗಿತ್ತು. ಈಗಾಗಲೇ ಐಪಿಸಿ ಸೆಕ್ಷನ್‌ಗಳಾದ 307 (ಕೊಲೆ ಯತ್ನ) ಮತ್ತು 304(2) (ಮಾನವಹತ್ಯೆಯ) ಅಡಿ ಆರೋಪಿತರ ವಿರುದ್ಧ ದಾಖಲಾಗಿದ್ದ ಗಂಭೀರ ಪ್ರಕರಣಗಳಿಂದ ಮುಂಬೈನ ಸೆಷನ್ಸ್‌ ನ್ಯಾಯಾಲಯವು ಅವರಿಗೆ ಮುಕ್ತಿ ನೀಡಿದೆ.

ಕೊನನ್‌ ಕೊಡಿಯೊ ಗನ್‌ಸ್ಟೋನ್‌ ಮತ್ತು ಎಚ್‌ಎಲ್‌ಎ ಎಸ್‌ಎಚ್‌ಡಬ್ಲುಇ ಪ್ರಕರಣಗಳಲ್ಲಿ ತಬ್ಲೀಘಿ ಜಮಾತ್‌ ಆಹ್ವಾನಿತರ ವಿರುದ್ಧ ದಾಖಲಾಗಿದ್ದ ದೂರುಗಳನ್ನು ಸಾಕ್ಷ್ಯ ಕೊರತೆಯ ಹಿನ್ನೆಲೆಯಲ್ಲಿ ವಜಾಗೊಳಿಸಿ, ಆರೋಪಿತರನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್‌ ತೀರ್ಪನ್ನು ಆಧಾರವಾಗಿಟ್ಟುಕೊಂಡು ವಕೀಲ ಎ ಎನ್‌ ಶೇಖ್‌ ವಾದಿಸಿದರು.

“ಆರೋಪಿತರು ಗುಂಪುಗೂಡಿರುವುದು ಅಥವಾ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಆರೋಪಿತರು ಉಲ್ಲಂಘಿಸಿರುವುದನ್ನು ಪರಿಶೀಲಿಸಲಾದ ಯಾವುದೇ ಸಾಕ್ಷಿದಾರರು ಕಂಡಿಲ್ಲ” ಎಂದು ನ್ಯಾಯಾಲಯಕ್ಕೆ ವಿವರಿಸಲಾಗಿದೆ.

“ಬಾಂಬೆ ಪೊಲೀಸ್ ಕಾಯಿದೆಯ ಸೆಕ್ಷನ್ 37ರ ಉಲ್ಲಂಘನೆಯ ಮೂಲ ತತ್ವವು ಸಾರ್ವಜನಿಕವಾಗಿ ಆದೇಶಗಳ ಪ್ರಕಟಣೆಯನ್ನು ಆಧರಿಸಿದೆ. ಪ್ರಶ್ನಾರ್ಹ ಆದೇಶವನ್ನು ಆರೋಪಿತ ವ್ಯಕ್ತಿಗಳಿಗೆ ಪ್ರತ್ಯೇಕವಾಗಿ ಘೋಷಿಸಲಾಗಿಲ್ಲ ಎಂಬುದು ಪಾರದರ್ಶಕವಾಗಿದೆ.”
ಅಂಧೇರಿ ನ್ಯಾಯಾಲಯ

ಆರೋಪಿತ ಎಲ್ಲಾ ವಿದೇಶಿ ಪ್ರಜೆಗಳನ್ನು ಖುಲಾಸೆಗೊಳಿಸಿರುವ ನ್ಯಾಯಾಲಯವು ಹಿಂದಿನ ಜಾಮೀನು ಬಾಂಡ್‌ಗಳನ್ನು ರದ್ದುಗೊಳಿಸಿದ್ದು, 10,000 ರೂಪಾಯಿ ಮೌಲ್ಯದ ಹೊಸ ಬಾಂಡ್‌ ಸಲ್ಲಿಸುವಂತೆ ಸೂಚಿಸಿದೆ. ಕಳೆದ ವಾರ ತಬ್ಲೀಘಿ ಜಮಾತ್‌ನಲ್ಲಿ ಭಾಗವಹಿಸಿದ್ದ 12 ಇಂಡೋನೇಷ್ಯಾದ ಪ್ರಜೆಗಳನ್ನು ಬಾಂದ್ರಾದ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಬಿಡುಗಡೆ ಮಾಡುವಂತೆ ಸೂಚಿಸಿತ್ತು.