Vijay Mallya, CBI  Vijay Mallya (Facebook)
ಸುದ್ದಿಗಳು

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಮುಂಬೈ ನ್ಯಾಯಾಲಯ

ಮಲ್ಯ ಅವರ ಪುನರಾವರ್ತಿತ ಗೈರುಹಾಜರಿ ಮತ್ತು ಅವರು ಪರಾರಿಯಾದ ಆರ್ಥಿಕ ಅಪರಾಧಿ ಆಗಿರುವುದನ್ನು ಗಮನಿಸಿದ ನ್ಯಾಯಾಲಯ, ಅವರು ನ್ಯಾಯಾಲಯಕ್ಕೆ ಹಾಜರಿರುವಂತೆ ಮುಕ್ತ ಜಾಮೀನು ರಹಿತ ವಾರೆಂಟ್ ಹೊರಡಿಸುವುದು ಸೂಕ್ತ ಎಂದಿತು.

Bar & Bench

ಸುಮಾರು ₹180 ಕೋಟಿ ಸಾಲ ತೀರಿಸದೆ ಸುಸ್ತಿದಾರನಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಫಿಶರ್‌ ವಿಮಾನಯಾನ ಸಂಸ್ಥೆ ಮಾಜಿ ಒಡೆಯ ಮತ್ತು ದೇಶದಿಂದ ಪಲಾಯನಗೈದಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಬಂಧಿಸಲು ಸಿಬಿಐ ಪ್ರಕರಣಗಳ ವಿಚಾರಣೆ ನಡೆಸುವ ಮುಂಬೈ ವಿಶೇಷ ನ್ಯಾಯಾಲಯವು ಇತ್ತೀಚೆಗೆ ಜಾಮೀನುರಹಿತ ವಾರೆಂಟ್‌ ಹೊರಡಿಸಿದೆ [ಸಿಬಿಐ ಮತ್ತು ವಿಜಯ್‌ ವಿಠಲ್‌ ಮಲ್ಯ ಇನ್ನಿತರರ ನಡುವಣ ಪ್ರಕರಣ].

ಮಲ್ಯ ಈಗಾಗಲೇ ಹಲವು ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಿರುವುದನ್ನು ಮತ್ತು ಅವರು ಪರಾರಿಯಾಗಿರುವ ಆರ್ಥಿಕ ಅಪರಾಧಿ ಆಗಿರುವುದನ್ನು ಗಮನಿಸಿದ ನ್ಯಾಯಾಧೀಶ ಎಸ್‌ ಪಿ ನಾಯಕ್ ನಿಂಬಾಳ್ಕರ್ ಅವರು ಮಲ್ಯ ನ್ಯಾಯಾಲಯಕ್ಕೆ ಹಾಜರಿರುವಂತೆ ಕಾಲಮಿತಿ ರಹಿತ ಜಾಮೀನು ರಹಿತ ವಾರೆಂಟ್ ಹೊರಡಿಸುವುದು ಸೂಕ್ತ ಎಂದಿತು.

ಮಲ್ಯ 2007 ಮತ್ತು 2012ರ ನಡುವೆ ಉದ್ದೇಶಪೂರ್ವಕವಾಗಿ ಸಾಲ ಪಾವತಿಸಿಲ್ಲ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ (ಐಒಬಿ) ₹ 180 ಕೋಟಿ ನಷ್ಟವಾಗಿದೆ ಎಂದು ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

2016ರಲ್ಲಿ, ಮಲ್ಯ ವಿರುದ್ಧ ಸಿಬಿಐ ಐಪಿಸಿ ಸೆಕ್ಷನ್  120 ಬಿ (ಕ್ರಿಮಿನಲ್ ಪಿತೂರಿ) ಹಾಗೂ ಇದರೊಂದಿಗೆ ಸಹವಾಚನ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 13 (2) ನೊಂದಿಗೆ ಸಹವಾಚನ ಸೆಕ್ಷನ್‌ 13(1)(ಡಿ) ಅಡಿ ಪ್ರಕರಣ ದಾಖಲಿಸಿತ್ತು

ಮಲ್ಯ ಅವರು ಉದ್ದೇಶಪೂರ್ವಕವಾಗಿ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ವಾದಿಸಿದ್ದ ಸಿಬಿಐ  ಅವರ ಬಂಧನಕ್ಕಾಗಿ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡುವಂತೆ ಕೋರಿತ್ತು.  

ಈ ಹಿಂದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಸಾಲಗಾರರ ಒಕ್ಕೂಟವು ಸಲ್ಲಿಸಿದ ಅರ್ಜಿಯಲ್ಲಿ ಉದ್ದೇಶಪೂರ್ವಕವಾಗಿ ತನ್ನ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ 2017 ರಲ್ಲಿ ಸುಪ್ರೀಂ ಕೋರ್ಟ್ ಮಲ್ಯ ಅವರನ್ನು ನ್ಯಾಯಾಂಗ ನಿಂದನೆಯ ಅಪರಾಧಿ ಎಂದು ಪರಿಗಣಿಸಿತ್ತು.

ಮಲ್ಯ ಅವರು ಸತ್ಯವನ್ನು ಮರೆಮಾಚಿದ್ದಾರೆ ಮತ್ತು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶಗಳನ್ನು "ಬಿಡುಬೀಸಾಗಿ ಉಲ್ಲಂಘಿಸಿ" ತಮ್ಮ ಮಗ ಸಿದ್ಧಾರ್ಥ್ ಮಲ್ಯ ಮತ್ತು ಪುತ್ರಿಯರಾದ ಲಿಯಾನಾ ಮತ್ತು ತಾನ್ಯಾ ಮಲ್ಯ ಅವರಿಗೆ ಹಣ ವರ್ಗಾಯಿಸಿದ್ದಾರೆ ಎಂದು ಬ್ಯಾಂಕ್‌ಗಳ ಒಕ್ಕೂಟ ಆರೋಪಿಸಿತ್ತು.

2017ರ ತೀರ್ಪಿನ ವಿರುದ್ಧ ಮಲ್ಯ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಆಗಸ್ಟ್ 2020 ರಲ್ಲಿ, ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.