Mamata Banerjee and Mumbai Sessions Court 
ಸುದ್ದಿಗಳು

ರಾಷ್ಟ್ರಗೀತೆಗೆ ಅಗೌರವ ಆರೋಪ: ಮಮತಾ ಬ್ಯಾನರ್ಜಿ ವಿರುದ್ಧದ ಸಮನ್ಸ್ ರದ್ದುಗೊಳಿಸಿದ ಮುಂಬೈ ನ್ಯಾಯಾಲಯ

ಸಮನ್ಸ್‌ನಲ್ಲಿ ಕಾರ್ಯವಿಧಾನದ ನ್ಯೂನತೆಗಳಿವೆ ಎಂದಿರುವ ನ್ಯಾಯಾಲಯ ಸೂಕ್ತ ಪ್ರಕ್ರಿಯೆ ಮುಖೇನ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚನೆ.

Bar & Bench

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಂಬೈ ಘಟಕದ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಸಲ್ಲಿಸಿದ್ದ ಕ್ರಿಮಿನಲ್‌ ದೂರಿಗೆ ಸಂಬಂಧಿಸಿದಂತೆ ಮಮತಾ ಅವರಿಗೆ ನೀಡಲಾಗಿದ್ದ ಸಮನ್ಸ್‌ ಅನ್ನು ಮುಂಬೈನ ನ್ಯಾಯಾಲಯವೊಂದು ಗುರುವಾರ ರದ್ದುಗೊಳಿಸಿದೆ.

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನೀಡಿರುವ ಸಮನ್ಸ್‌ನಲ್ಲಿ ಕಾರ್ಯವಿಧಾನದ ನ್ಯೂನತೆಗಳಿದ್ದು ಅದು ಕಾನೂನಿನ ಕಡ್ಡಾಯ ನಿಯಮಗಳನ್ನು ಪಾಲಿಸಿಲ್ಲ ಎಂದು ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಹೇಳಿದ್ದಾರೆ. "ಮ್ಯಾಜಿಸ್ಟ್ರೇಟ್‌ ಅವರು ಅನುಸರಿಸಿರುವ ಪ್ರಕ್ರಿಯೆಯಲ್ಲಿ ಅನೇಕ ಸಮಸ್ಯೆಗಳಿವೆ. ಉದಾಹರಣೆಗೆ, ಗುಪ್ತಾ ಅವರ ದೂರನ್ನು ಅಫಿಡವಿಟ್‌ ಮೂಲಕ ದೃಢೀಕರಿಸಬೇಕಿತ್ತು. ಆದರೆ ಹಾಗೆ ಮಾಡಿಲ್ಲ," ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೂಕ್ತ ಪ್ರಕ್ರಿಯೆ ಮುಖೇನ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ಸೂಕ್ತ ಕಾನೂನಿನ ಪ್ರಕ್ರಿಯೆಯ ಅನುಸಾರ ಪ್ರಕರಣವನ್ನು ಹೊಸತಾಗಿ ಪರಿಗಣಿಸುವಂತೆ ಸೂಚಿಸಿ ಮ್ಯಾಜಿಸ್ಟ್ರೇಟ್‌ಗೆ ಪ್ರಕರಣವನ್ನು ಹಿಂತಿರುಗಿಸಿತು.

ಮುಂಬೈನ ಕಫೆ ಪರೇಡ್‌ನಲ್ಲಿರುವ ಯಶವಂತರಾವ್ ಚವಾಣ್ ಸಭಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಕೊನೆಯಲ್ಲಿ ಬ್ಯಾನರ್ಜಿ ಅವರು ಕುಳಿತ ಭಂಗಿಯಲ್ಲಿಯೇ ರಾಷ್ಟ್ರಗೀತೆಯನ್ನು  ಹಾಡಲು ಪ್ರಾರಂಭಿಸಿದರು. ಬಳಿಕ ಎದ್ದುನಿಂತು ಗೀತೆಯ ಎರಡು ಚರಣಗಳನ್ನು ಹಾಡಿ ಥಟ್ಟನೆ ನಿಲ್ಲಿಸಿ ಅಲ್ಲಿಂದ ಹೊರನಡೆದರು. ಇದು ರಾಷ್ಟ್ರ ಗೌರವ ಕಾಯಿದೆ-1971ರ ಅನ್ವಯ ತಪ್ಪು  ಎಂಬುದು ಗುಪ್ತಾ ಅವರ ಆರೋಪವಾಗಿತ್ತು.