Raj Kundra twitter 
ಸುದ್ದಿಗಳು

ಅಶ್ಲೀಲ ಚಿತ್ರ ಪ್ರಕರಣ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಮುಂಬೈ ನ್ಯಾಯಾಲಯ

ಅಶ್ಲೀಲ ಚಿತ್ರಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಐಪಿಸಿ ಮತ್ತು ಐಟಿ ಕಾಯಿದೆಯಡಿ ಕುಂದ್ರಾರನ್ನು ಜುಲೈ 19ರಂದು ಮುಂಬೈ ಪೊಲೀಸ್ ಅಪರಾಧ ವಿಭಾಗ ಬಂಧಿಸಿತ್ತು.

Bar & Bench

ಅಶ್ಲೀಲ ಚಲನಚಿತ್ರ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾರನ್ನು ಮುಂಬೈ ನ್ಯಾಯಾಲಯವೊಂದು ಪೊಲೀಸ್‌ ವಶಕ್ಕೆ ನೀಡಿದೆ.

ಕುಂದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 292, 293 (ಅಶ್ಲೀಲ ಸಾಮಗ್ರಿಗಳ ಮಾರಾಟ), ಮಾಹಿತಿ ತಂತ್ರಜ್ಞಾನ ಕಾಯಿದೆಯ ಕಾಯಿದೆಯ ಸೆಕ್ಷನ್ 67, 67 ಎ (ಅಶ್ಲೀಲ ವಿಷಯಗಳ ಪ್ರಸರಣ) ಮತ್ತು ಮಹಿಳೆಯರ ಅಸಭ್ಯ ಚಿತ್ರಣ (ನಿಷೇಧ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸೋಮವಾರ ಬಂಧಿತರಾದ ಕುಂದ್ರಾ ಅವರನ್ನು ಎಸ್ಪ್ಲನೆಡ್‌ನಲ್ಲಿರುವ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರುಪಡಿಸಲಾಯಿತು. ತನ್ನ ಕಂಪನಿ ತಯಾರಿಸುತ್ತಿರುವ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳಿಂದ ಕುಂದ್ರಾ ಲಾಭ ಗಳಿಸುತ್ತಿದ್ದಾರೆ ಎಂದು ಪ್ರಾಸಿಕ್ಯೂಷನ್ ವಾದಿಸಿತು.

ಕಂಪೆನಿಯ ಖಾತೆಯಲ್ಲಿ ಪೊಲೀಸರಿಗೆ ಸಾಕಷ್ಟು ವಿದೇಶಿ ಹಣ ಇರುವುದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ. ಕುಂದ್ರಾ ಅವರ ಮೊಬೈಲ್‌ ಫೋನ್‌ನಲ್ಲಿ ಇರುವ ಕಂಟೆಂಟ್‌ ಮತ್ತು ಪ್ರಕರಣದ ಸಹ ಆರೋಪಿಗಳು ನೀಡಿದ ಹೇಳಿಕೆಗಳ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಲು ಬಯಸಿದ್ದಾರೆ. ಈ ಆಧಾರದ ಮೇಲೆ ಪ್ರಾಸಿಕ್ಯೂಷನ್‌ ಕುಂದ್ರಾರನ್ನು ಗರಿಷ್ಠ ಅವಧಿಯವರೆಗೆ ಕಸ್ಟಡಿಗೆ ಒಪ್ಪಿಸಬೇಕು ಎಂದು ಹೇಳಿದರು.

ಕುಂದ್ರಾ ಪರವಾಗಿ ಹಾಜರಾದ ಹಿರಿಯ ವಕೀಲ ಆಬಾದ್ ಪೊಂಡಾ, “ಕುಂದ್ರಾ ಅವರ ವಿರುದ್ಧ ಹೊರಿಸಲಾಗಿರುವ ಎಲ್ಲಾ ಆರೋಪಗಳಲ್ಲಿ ಕೇವಲ ಎರಡು ಅಪರಾಧಗಳು ಮಾತ್ರ ಜಾಮೀನು ರಹಿತವಾಗಿದ್ದು ಅವರನ್ನು ಪೊಲೀಸ್‌ ವಶಕ್ಕೆ ನೀಡುವುದು ಕಾನೂನುಬಾಹಿರ ಎಂದು ವಾದಿಸಿದರು.

ಕುಂದ್ರಾರನ್ನು ವಶಕ್ಕೆ ತೆಗೆದುಕೊಳ್ಳದೆ ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ಸಾಧ್ಯವಿಲ್ಲ ಮತ್ತು ಆವರನ್ನು ಬಂಧಿಸುವ ಮೊದಲು ವಿಚಾರಣೆ ನಡೆಸಲು ಸಿಆರ್‌ಪಿಸಿ ಸೆಕ್ಷನ್ 41ರ ಅಡಿ ಯಾವುದೇ ಸಮನ್ಸ್ ಏಕೆ ನೀಡಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಅವರು ವಾದಿಸಿದರು.

ಎರಡೂ ಕಡೆಯ ಸುದೀರ್ಘ ವಾದ ಆಲಿಸಿದ ಬಳಿಕ ನ್ಯಾಯಾಲಯ ಕುಂದ್ರಾರನ್ನು ಪೊಲೀಸ್‌ ವಶಕ್ಕೆ ಒಪ್ಪಿಸಿತು.