Karnataka High Court
Karnataka High Court 
ಸುದ್ದಿಗಳು

ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ ಯತ್ನ ಪ್ರಕರಣ: ಭೂಗತ ಪಾತಕಿ ರವಿ ಪೂಜಾರಿ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್‌

Bar & Bench

ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಕೊಲೆಗೆ ಸುಪಾರಿ ನೀಡಿದ ಪ್ರಕರಣದ ಆರೋಪಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ಬೆಂಗಳೂರಿನ ತಿಲಕ್‌ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ರವಿ ಪೂಜಾರಿ ಅಲಿಯಾಸ್‌ ರವಿಪ್ರಕಾಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ವಿಚಾರಣಾಧೀನ ನ್ಯಾಯಾಲಯವು ಬಹು ಹಿಂದೆಯೇ ಆರೋಪ ನಿಗದಿ ಮಾಡಿದ್ದರೂ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರಿ ಅಭಿಯೋಜಕರು ವಿಫಲರಾಗಿದ್ದಾರೆ. ಸಾಕ್ಷಿಗಳನ್ನು ಕರೆಸಿ, ಅವರನ್ನು ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿತ್ತು. ವಿಚಾರಣಾಧೀನ ನ್ಯಾಯಾಲಯವು ಒಂದು ವರ್ಷದಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು. ವರ್ಷದೊಳಗೆ ವಿಚಾರಣೆ ಮುಗಿಯದಿದ್ದರೆ ಸರ್ಕಾರಿ ಅಭಿಯೋಜಕರು ಜವಾಬ್ದಾರರಾಗುತ್ತಾರೆ” ಎಂದು ನ್ಯಾಯಾಲಯವು ಹೇಳಿದ್ದು, ಜಾಮೀನು ಅರ್ಜಿ ವಜಾ ಮಾಡಿದೆ.

ಅರ್ಜಿದಾರರ ಪರ ವಕೀಲ ದಿಲ್‌ ರಾಜ್‌ ಜೂಡ್‌ ರೋಹಿತ್‌ ಸೀಕ್ವೈರಾ ಅವರು “ಹೈಕೋರ್ಟ್‌ ಆದೇಶದ ಹೊರತಾಗಿಯೂ ವಿಚಾರಣೆ ಆರಂಭವಾಗಿಲ್ಲ. ನ್ಯಾಯಾಲಯ ಆದೇಶ ಮಾಡಿ ಎರಡೂವರೆ ವರ್ಷವಾಗಿದ್ದರೂ ಒಂದೇ ಒಂದು ಸಾಕ್ಷಿಯ ವಿಚಾರಣೆ ನಡೆಸಲಾಗಿಲ್ಲ. ವಿಚಾರಣೆ ಈ ಪರಿಯಲ್ಲಿ ವಿಳಂಬವಾದರೆ ಸಾರ್ವಜನಿಕರು ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ” ಎಂದು ವಾದಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರಿ ಅಭಿಯೋಜಕರು “ಆರೋಪಿ ರವಿ ಪೂಜಾರಿಯನ್ನು ಸೆನೆಗಲ್‌ನಿಂದ ಹಸ್ತಾಂತರ ಮಾಡಲಾಗಿದ್ದು, ಕರ್ನಾಟಕದಲ್ಲಿ ಆತನ ವಿರುದ್ಧ 107 ಪ್ರಕರಣ ಬಾಕಿ ಇದ್ದು, ಮಹಾರಾಷ್ಟ್ರದಲ್ಲಿ 20, ಕೇರಳ, ಗುಜರಾತ್‌ ಮತ್ತು ರಾಜಸ್ಥಾನದಲ್ಲಿ ಆತನ ವಿರುದ್ದ ಪ್ರಕರಣ ದಾಖಲಾಗಿವೆ. ತನಿಖೆಗಾಗಿ ಆರೋಪಿಯನ್ನು ಬೇರೆಬೇರೆ ರಾಜ್ಯಗಳಿಗೆ ಕರೆದೊಯ್ಯುತ್ತಿರುವುದರಿಂದ ಹಾಲಿ ಪ್ರಕರಣದ ವಿಚಾರಣೆಯಲ್ಲಿ ತಡವಾಗಿದೆ” ಎಂದಿದ್ದರು.

ಪ್ರಕರಣದ ಹಿನ್ನೆಲೆ: ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿರುವವರಲ್ಲಿ ಭಯ ಹುಟ್ಟಿಸಿ, ಉದ್ಯಮದ ಮೇಲೆ ಹಿಡಿತ ಸಾಧಿಸುವ ಮೂಲಕ ಹಣ ಸುಲಿಗೆ ಮಾಡುವ ಉದ್ದೇಶದಿಂದ ಶಬ್ನಂ ಡೆವಲಪರ್ಸ್‌ನ ಕೆ ಎಸ್‌ ಸಮೀವುಲ್ಲಾ ಮತ್ತು ಅವರ ಸ್ನೇಹಿತರ ಕೊಲೆಗೆ ಬೆಂಗಳೂರಿನ ನಾಲ್ಕು ಕಡೆ 2007ರ ಜನವರಿ ಮತ್ತು ಫೆಬ್ರವರಿ 15ರ ನಡುವೆ ರವಿ ಪೂಜಾರಿ ಸೂಚನೆ ಮೇರೆಗೆ 17 ಮಂದಿ ಆತನ ಬಂಟರು ಕೊಲೆ ಪ್ರಯತ್ನ ನಡೆಸಿದ್ದರು. ಮೊದಲಿಗೆ ಗ್ರೀನ್‌ ಪಾರ್ಕ್‌, ಆನಂತರ ವೈಸ್‌ರಾಯ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌, ಹಲಸೂರು ಬಳಿಯ ಆಕ್ಟೀವ್‌ ಎಸ್ಟೇಟ್ಸ್‌, ಸುದ್ದೆಗುಂಟೆ ಪಾಳ್ಯದ ನೇತ್ರಾವತಿ ಎಂಟರ್‌ಪ್ರೈಸಸ್‌ ಬಳಿ ಕೊಲೆ ಯತ್ನ ನಡೆಸಲಾಗಿತ್ತು. 2007ರ ಫೆಬ್ರವರಿ 15ರಂದು ಆನಂದ್‌ ಮತ್ತು ವಿಜಿ ಎಂಬವರು ಶಬ್ನಂ ಡೆವಲಪರ್ಸ್‌ ಬಳಿ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಅಲ್ಲಿನ ಉದ್ಯೋಗಿಗಳಾದ ರವಿ ಮತ್ತು ಶೈಲಜಾ ಎಂಬವರು ಸಾವನ್ನಪ್ಪಿದ್ದರು. ಈ ಘಟನೆ ಆಧರಿಸಿ ಅಕ್ರಂ ಪಾಷಾ ಎಂಬವರು ನೀಡಿದ ದೂರಿನ ಮೇರೆಗೆ ರವಿ ಪೂಜಾರಿ ಸೇರಿದಂತೆ 18 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 302, 307 ಮತ್ತು ಶಸಾಸ್ತ್ರ ಕಾಯಿದೆ ಸೆಕ್ಷನ್‌ 3 ಮತ್ತು 25ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ರವಿ ಪೂಜಾರಿ ಸೇರಿ ಐವರು ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಭಜಿಸಲಾಗಿತ್ತು. ಉಳಿದವರು ಪ್ರಕರಣದಲ್ಲಿ ಖುಲಾಸೆಯಾಗಿದ್ದರು. ಈ ಪ್ರಕರಣದಲ್ಲಿ ರವಿ ಪೂಜಾರಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.