Bombay High Court and Supreme Court  
ಸುದ್ದಿಗಳು

ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಮೇಲ್ಮನವಿ ವಿಚಾರಣೆಗೆ 9 ವರ್ಷ ಕಾದಿದ್ದ ಕೊಲೆ ಅಪರಾಧಿ ಸಾವು

ಮೇಲ್ಮನವಿಯ ವಿಚಾರಣೆ ನಡೆಯುತ್ತಿದ್ದಾಗ ಕೆಲ ತಿಂಗಳುಗಳ ಹಿಂದೆ ಸಂತ್ರಸ್ತರಲ್ಲೊಬ್ಬರ ತಂದೆ ಕೂಡ ಮೃತಪಟ್ಟಿದ್ದರು.

Bar & Bench

ಮೇಲ್ಮನವಿಯ ಅಂತಿಮ ವಿಚಾರಣೆಗಾಗಿ ಒಂಬತ್ತು ವರ್ಷ ಕಾದಿದ್ದ ಕೊಲೆ ಅಪರಾಧಿಯೊಬ್ಬ ತೀರ್ಪು ಬರುವ ಮುನ್ನವೇ ಇಹಲೋಕ ತ್ಯಜಿಸಿದ್ದಾನೆ. ಮೂರು ತಿಂಗಳೊಳಗೆ ಪ್ರಕರಣದ ಕುರಿತು ಬಾಂಬೆ ಹೈಕೋರ್ಟ್‌ ತೀರ್ಪು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿ ಒಂಬತ್ತು ತಿಂಗಳು ಕಳೆದರೂ ತೀರ್ಪು ಹೊರಬಿದ್ದಿರಲಿಲ್ಲ. ಅಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ.

ಇಬ್ಬರ ಹತ್ಯೆ ಮತ್ತು ಸಂಬಂಧಿತ ಅಪರಾಧದಲ್ಲಿ ನಾಲ್ವರು ಆರೋಪಿಗಳಿಗೆ ಮುಂಬೈನ ವಿಚಾರಣಾ ನ್ಯಾಯಾಲಯ ಮೇ 5, 2016 ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಆರೋಪಿಗಳಲ್ಲಿ ಒಬ್ಬನಾದ ಸತೀಶ್ ನಫೇಶಿಂಗ್ ದುಲ್ಗಜ್ 14 ವರ್ಷಕ್ಕಿಂತ ಹೆಚ್ಚು ಕಾಲ ಜೈಲಲ್ಲಿ ಇದ್ದ. ಆತ ಈ ವಾರ ನಿಧನನಾಗಿರುವ ಕುರಿತು ಅಪರಾಧಿಗಳ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಶಿಕ್ಷೆಯ ವಿರುದ್ಧ ಅವರು 2016 ರಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ 2017 ರ ಸೆಪ್ಟೆಂಬರ್‌ನಲ್ಲಿ ಸ್ವೀಕರಿಸಿತ್ತು. ಆದರೆ  ಆದರೆ ಕೃತ್ಯ ನಡೆದು 9 ವರ್ಷಗಳಾದರೂ ಅಂತಿಮ ವಿಚಾರಣೆ ನಡೆದಿರಲಿಲ್ಲ. ಮೂರು ತಿಂಗಳೊಳಗೆ ಮೇಲ್ಮನವಿಯನ್ನು ವಿಲೇವಾರಿ ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ಕಳೆದ ಮಾರ್ಚ್‌ನಲ್ಲಿ ಹೈಕೋರ್ಟ್‌ಗೆ ತಿಳಿಸಿತ್ತಾದರೂ ವಿಚಾರಣೆ ಆಮೆವೇಗದಲ್ಲಿ ಸಾಗಿತ್ತು.

ಪ್ರತಿ ದಿನ 100ಕ್ಕೂ ಹೆಚ್ಚು ಪ್ರಕರಣಗಳು ಬರುತ್ತಿವೆ, ಅಂತಿಮ ವಾದಕ್ಕೆ ದಿನದಲ್ಲಿ ಸಂಜೆ 4 ಗಂಟೆಯ ನಂತರ ಮಾತ್ರ ಸಮಯ ಸಿಗುತ್ತದೆ ಎಂದು ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ ನುಡಿದಿತ್ತು. ಕಳೆದ ಏಪ್ರಿಲ್‌ 30, ಜುಲೈ 2, ಆಗಸ್ಟ್ 12, ಅಕ್ಟೋಬರ್‌ 10ರಂದು ಕೂಡ ಪ್ರಕರಣ ಮುಂದೂಡಲಾಗಿತ್ತು. ಬಳಿಕ ಇದೇ ನವೆಂಬರ್ 10ಕ್ಕೆ ಮೇಲ್ಮನವಿ ಪಟ್ಟಿ ಮಾಡಲು ಆದೇಶಿಸಲಾಗಿತ್ತು.

ದಿನಾಂಕಗಳಷ್ಟೇ ಮುಂದೂಡಿಕೆಯಾಗದೆ ಮೇಲ್ಮನವಿ ವಿಚಾರಣೆ ನಡೆಸುವ ಪೀಠಗಳು ಬದಲಾಗಿರುವುದು ಕೂಡ ಆದೇಶದ ಪ್ರತಿಗಳಿಂದ ಸ್ಪಷ್ಟವಾಗಿತ್ತು. ಮತ್ತೊಂದೆಡೆ ಮೇಲ್ಮನವಿಯ ವಿಚಾರಣೆ ನಡೆಯುತ್ತಿದ್ದಾಗ ಕೆಲ ತಿಂಗಳುಗಳ ಹಿಂದೆ ಸಂತ್ರಸ್ತರಲ್ಲೊಬ್ಬರ ತಂದೆ ಕೂಡ ಮೃತಪಟ್ಟಿದ್ದರು.