ಮೇಲ್ಮನವಿ ಸಲ್ಲಿಕೆಗೆ 11 ವರ್ಷ ವಿಳಂಬ: ಕರ್ನಾಟಕ ಸರ್ಕಾರದ ಕಿವಿ ಹಿಂಡಿದ ಸುಪ್ರೀಂ ಕೋರ್ಟ್‌

ಸರ್ಕಾರಿ ಇಲಾಖೆಗಳು ತಮ್ಮ ನಿರ್ಲಕ್ಷ್ಯ ಮತ್ತು ವಿಳಂಬ ಸಮರ್ಥಿಸಿಕೊಳ್ಳಲು ಸಾರ್ವಜನಿಕ ಹಿತಾಸಕ್ತಿ ಎಂಬುದನ್ನು ನೆಪ ಮಾಡಿಕೊಳ್ಳಬಾರದು ಎಂದು ಪೀಠ ಹೇಳಿತು.
Supreme Court
Supreme Court
Published on

ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಮೇಲ್ಮನವಿ ಸಲ್ಲಿಸುವಲ್ಲಿ 3,966 ದಿನಗಳ (11 ವರ್ಷಗಳು) ವಿಳಂಬ ಮಾಡಿರುವುದನ್ನು  ಮನ್ನಿಸಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ಶಿವಮ್ಮ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

 ಸರ್ಕಾರಿ ಇಲಾಖೆಗಳು ತಮ್ಮ ನಿರ್ಲಕ್ಷ್ಯ ಮತ್ತು ವಿಳಂಬ ಸಮರ್ಥಿಸಿಕೊಳ್ಳಲು ಸಾರ್ವಜನಿಕ ಹಿತಾಸಕ್ತಿ ಎಂಬುದನ್ನು ನೆಪ ಮಾಡಿಕೊಳ್ಳಬಾರದು ನ್ಯಾಯಾಲಯ ಅದಕ್ಕೆ ಒಪ್ಪಿದರೆ ಸಾರ್ವಜನಿಕ ಹಿತಾಸಕ್ತಿ ಕಾಪಾಡಿದಂತಾಗುವುದಿಲ್ಲ ಬದಲಿಗೆ ಅದಕ್ಕೆ ಎಸಗಿದ ದ್ರೋಹವಾಗುತ್ತದೆ ಎಂದು ಅದು ಕಿಡಿಕಾರಿದೆ.

Also Read
ಜಾಲತಾಣಗಳಲ್ಲಿ ತೀರ್ಪಿನ ಪ್ರತಿ ಪ್ರಕಟಿಸಲು ಹೈಕೋರ್ಟ್‌ಗಳ ವಿಳಂಬ: ಸುಪ್ರೀಂ ಕೋರ್ಟ್‌ ತೀವ್ರ ಕಳವಳ

ತಾನು ಎಸಗುವ ತಪ್ಪುಗಳಿಗೆಲ್ಲಾ ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ಸದಾ ಕ್ಷಮೆ ದೊರೆಯುತ್ತದೆ ಎಂದು ಸರ್ಕಾರ ಭರವಸೆ ಇರಿಸಿಕೊಂಡರೆ ಅಧಿಕಾರಿಗಳು ಜಾಗ್ರತೆಯಿಂದ ಕೆಲಸ ಮಾಡುವ ಉತ್ಸಾಹ ಕಳೆದುಕೊಳ್ಳುತ್ತಾರೆ. ಹೀಗಾದಾಗ ಅದು ಸಾರ್ವಜನಿಕ ಹಿತಾಸಕ್ತಿ ಆಗುವುದಿಲ್ಲ ಬದಲಿಗೆ ಅದಕ್ಕೆ ಎಸಗಿದ ದ್ರೋಹವಾಗುತ್ತದೆ ಎಂದು ನ್ಯಾಯಾಲಯ ಸೆಪ್ಟೆಂಬರ್‌ 12ರಂದು ನೀಡಿದ ತೀರ್ಪಿನಲ್ಲಿ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ 9 ಎಕರೆ 13 ಗುಂಟೆ ಅಳತೆಯ ಜಮೀನು ವ್ಯಾಜ್ಯದ ವಿಚಾರಣೆ ನಡೆಸಿದ ವೇಳೆ ಈ ಅಂಶಗಳನ್ನ ಹೇಳಿದೆ.

1989ರ ರಾಜಿ ತೀರ್ಪಿನ ನಂತರ, ಮೇಲ್ಮನವಿ ಸಲ್ಲಿಸಿದ ಶಿವಮ್ಮ ಎಂಬುವವರು ಭೂಮಿಯ ಸಂಪೂರ್ಣ ಮಾಲೀಕರಾದರು, ಆದರೆ ಕೆಎಚ್‌ಬಿ 1979ರಲ್ಲಿಯೇ ವಸತಿ ಕಾಲೋನಿಗಾಗಿ  4 ಎಕರೆಗಳನ್ನು ಸ್ವಾಧೀನಪಡಿಸಿಕೊಂಡಿತ್ತು.

ಶಿವಮ್ಮ 1989ರಲ್ಲಿ ಮೊಕದ್ದಮೆ ಹೂಡಿದ್ದರು ಮತ್ತು 1997ರಲ್ಲಿ ಅವರ ವಿರುದ್ಧ ತೀರ್ಪು ಬಂತು. ಮೇಲ್ಮನವಿ ನ್ಯಾಯಾಲಯ 2006ರಲ್ಲಿ ಆಕೆಯ ಪರವಾಗಿ ತೀರ್ಪು ನೀಡಿತು. ಆದರೆ ಕೆಎಚ್‌ಬಿ ಅದಾಗಲೇ ನಿರ್ಮಾಣ ಕಾಮಗಾರಿ ಕೈಗೊಂಡಿದ್ದರಿಂದ ಭೂಮಿಯನ್ನು ಶಿವಮ್ಮ ಅವರ ಸುಪರ್ದಿಗೆ ನೀಡುವ ಬದಲು ಪರಿಹಾರ ಒದಗಿಸುವಂತೆ ಸೂಚಿಸಿತು.

ಮೊದಲ ಮೇಲ್ಮನವಿ ನ್ಯಾಯಾಲಯವು ಹೊರಡಿಸಿದ ತೀರ್ಪಿನ ಪ್ರಕಾರ ಕೆಎಚ್‌ಬಿ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಮೇಲ್ಮನವಿದಾರರು 2011ರಲ್ಲಿ ಮೊಕದ್ದಮೆ ಹೂಡಿದರು.

ಕೆಎಚ್‌ಬಿ ಫೆಬ್ರವರಿ 14, 2017ರಂದು ಹೈಕೋರ್ಟ್‌ನಲ್ಲಿ ಎರಡನೇ ಮೇಲ್ಮನವಿ ಸಲ್ಲಿಸಿತು ಮತ್ತು 3,966 ದಿನಗಳ ವಿಳಂಬವನ್ನು ಕ್ಷಮಿಸುವಂತೆ ಅರ್ಜಿ ಸಲ್ಲಿಸಿತು. ಸಾರ್ವಜನಿಕ ಹಿತಾಸಕ್ತಿಯನ್ನು ಉಲ್ಲೇಖಿಸಿ ಮಾರ್ಚ್ 21, 2017ರಂದು ಹೈಕೋರ್ಟ್ ಈ ಅರ್ಜಿಯನ್ನು  ಪುರಸ್ಕರಿಸಿತು. ಹೀಗಾಗಿ ಶಿವಮ್ಮ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು.

ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸಬೇಕಾದರೆ ಸರ್ಕಾರ ಸಕಾಲಕ್ಕೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ತಪ್ಪುಗಳನ್ನು ನಿರ್ಲಕ್ಷಿಸಿ ಕ್ಷಮಿಸಿದರೆ ಅದರಿಂದ ಸಾರ್ವಜನಿಕರ ಹಿತಕ್ಕೆ ಹಾನಿಯೇ ಆಗುತ್ತದೆ ಎಂದು ನಾಯಾಲಯ ನುಡಿಯಿತು.

ಹೀಗಾಗಿ, ಹೈಕೋರ್ಟ್  ತೀರ್ಪಿನ ತಾರ್ಕಿಕತೆಯನ್ನು ತಿರಸ್ಕರಿಸಿದ ಅದು ವ್ಯವಸ್ಥೆ ಅಸಡ್ಡೆ ತೋರದಂತೆ ಎಚ್ಚರಿಕೆ ನೀಡಿತು. ಸರ್ಕಾರ ಮಾಡಿದ ವಿಳಂಬವನ್ನು ಕ್ಷಮಿಸುತ್ತಾ ಹೋಗುವುದು ವ್ಯವಸ್ಥೆಯನ್ನು ಅದಕ್ಷಗೊಳಿಸುವ ಹಾನಿಕಾರಕ ಪರಿಣಾಮ ಬೀರುತ್ತದೆ. ಇದರಿಂದ ಆಲಸ್ಯಕ್ಕೆ ಉತ್ತೇಜನ ದೊರೆತು ವಿಳಂಬದ ಹೊಣೆ ಹೊರಬೇಕಾದ ಸಂಸ್ಕೃತಿ ಮಾಯವಾಗುತ್ತದೆ ಎಂದು ಅದು ಹೇಳಿತು.

ಸಾರ್ವಜನಿಕ ಹಿತಾಸಕ್ತಿ ಎಂಬುದು ಸರ್ಕಾರದ ನಿರ್ಲಕ್ಷ್ಯವನ್ನು ಮನ್ನಿಸುವುದರಲ್ಲಿ ಇರದೆ, ದಕ್ಷತೆ, ಜವಾಬ್ದಾರಿ ಮತ್ತು ಸಕಾಲಿಕ ನಿರ್ಧಾರ ತೆಗೆದುಕೊಳ್ಳುವುದರಲ್ಲಿದೆ ಎಂದು ಸುಪ್ರೀಂ ಕೋರ್ಟ್  ತೀಕ್ಷ್ಣವಾಗಿ ನುಡಿಯಿತು.

Also Read
ಎಜಿ, ಎಎಜಿ, ಎಸ್‌ಪಿಪಿ, ಸರ್ಕಾರಿ ವಕೀಲರ ಶುಲ್ಕ ಪಾವತಿಯಲ್ಲಿ ಸರ್ಕಾರದ ವಿಳಂಬ ಧೋರಣೆ ಸಲ್ಲ: ಹೈಕೋರ್ಟ್‌

ವಿಳಂಬ ಕ್ಷಮಿಸುವುದು ಅಪವಾದವಾಗಿದ್ದು, ಅದನ್ನು ಸರ್ಕಾರಿ ಇಲಾಖೆಗಳು ತಮ್ಮ ನಿರೀಕ್ಷಿತ ಉಪಯೋಗಕ್ಕಾಗಿ ಬಳಸಬಾರದು ಎಂದು ನ್ಯಾಯಾಲಯ ಕಿವಿ ಹಿಂಡಿತು. ಅಂತೆಯೇ, ಲಿಮಿಟೇಷನ್‌ ಕಾಯಿದೆಯ ಸೆಕ್ಷನ್ 5 ರ ಅಡಿಯಲ್ಲಿ ರಾಜ್ಯ ಸರ್ಕಾರದ ಆಲಸ್ಯ ಮತ್ತು ಪುರುಸೊತ್ತಿಗೆ ಅವಕಾಶ ನೀಡಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಂತಿಮವಾಗಿ ಹೈಕೋರ್ಟ್‌ ಆದೇಶ ರದ್ದುಗೊಳಿಸಿದ ಅದು ಮೊದಲ ಮೇಲ್ಮನವಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಮತ್ತೆ ಜಾರಿಗೆ ತಂದಿತು. ಎರಡು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದಲ್ಲದೆ ಕೆಎಚ್‌ಬಿ ₹25,000 ದಂಡ ಪಾವತಿಸಬೇಕು. ಆ ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಅದು ಆದೇಶಿಸಿತು.

Kannada Bar & Bench
kannada.barandbench.com