Murugha Mutt and Dr. Shivamurthy Murugha Sharanaru 
ಸುದ್ದಿಗಳು

ಮುರುಘಾ ಶರಣರಿಗೆ ನಿರ್ಬಂಧ: ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಅನ್ವಯಕ್ಕೆ ಹಿರಿಯ ವಕೀಲ ನಾಗೇಶ್‌ ಕಳವಳ

ಕಾಯಿದೆಯ ಸೆಕ್ಷನ್‌ 3 ಎಫ್‌ ಮತ್ತು ಕಾಯಿದೆಯ ಪೀಠಿಕೆಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಅರ್ಥೈಸುವುದಾದರೆ ಶರಣರ ವಿರುದ್ಧ ಮಾಡಲಾದ ಆರೋಪವು ಈ ಕಾನೂನಿನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದ ಹಿರಿಯ ವಕೀಲ ನಾಗೇಶ್‌.

Bar & Bench

ಸಣ್ಣಪುಟ್ಟದ್ದಕ್ಕೆಲ್ಲಾ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಅನ್ವಯ ಮಾಡುತ್ತಾ ಹೋದರೆ ರಾಜ್ಯದಲ್ಲಿ ಧಾರ್ಮಿಕ ಸಂಸ್ಥೆಗಳು ಮುಚ್ಚಿಕೊಂಡು ಹೋಗುತ್ತವೆ ಎಂದು ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಗುರುವಾರ ಕಳವಳ ವ್ಯಕ್ತಪಡಿಸಿದರು.

ಪೋಕ್ಸೊ, ಅತ್ಯಾಚಾರ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಮತ್ತು ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಮುರುಘಾ ಶರಣರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ–1988ರ ಸೆಕ್ಷನ್‌ 8(2)ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಧೀಶರು ವಿಚಾರಣೆ ಆರಂಭಕ್ಕೂ ಮೊದಲೇ ಮಾಡಿರುವ ಈ ನಿರ್ಬಂಧದ ಆದೇಶ ಸಿಂಧುವಲ್ಲ. ಏಕೆಂದರೆ, ವಿಚಾರಣೆಯನ್ನು ಬಾಕಿ ಇರಿಸಿ ಎಂದು ಹೇಳುವ ಶಬ್ದವು ದೋಷಾರೋಪ ಹೊರಿಸಿದ ನಂತರ ಆರಂಭವಾಗುವ ವಿಚಾರಣೆ ಎಂದೇ ಅರ್ಥೈಸಬೇಕಾಗುತ್ತದೆ ಎಂದು ವಿವರಿಸಿದರು.

ಯಾವಾಗಲೋ ಒಮ್ಮೆ ಎಸಗಿದ ಅಪರಾಧಕ್ಕೆ ನಿರಂತರ ಅಪರಾಧಗಳ ಸರಮಾಲೆ ಎಂದು ವ್ಯಾಖ್ಯಾನಿಸಲು ಆಗುವುದಿಲ್ಲ. ಅಂತೆಯೇ, ಈ ಕಾಯಿದೆಯ ಸೆಕ್ಷನ್‌ 3 ಎಫ್‌ ಮತ್ತು ಕಾಯಿದೆಯ ಪೀಠಿಕೆಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಅರ್ಥೈಸುವುದಾದರೆ ಶರಣರ ವಿರುದ್ಧ ಮಾಡಲಾದ ಆರೋಪವು ಈ ಕಾನೂನಿನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದರು.

ನಾಗೇಶ್‌ ಅವರ ವಾದಕ್ಕೆ ಪ್ರತ್ಯುತ್ತರವಾಗಿ ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಸರ್ಕಾರಿ ವಕೀಲ ಆರ್ ಶ್ರೀನಿವಾಸ ಗೌಡ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪೀಠವು ವಿಚಾರಣೆಯನ್ನು ಮಾರ್ಚ್‌ 2ಕ್ಕೆ ಮುಂದೂಡಿದೆ.

ಇದೇ ವೇಳೆ ಮಠಕ್ಕೆ ಸರ್ಕಾರ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ ಅವರ ನೇಮಕಾತಿ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆಯೂ ಮಾರ್ಚ್‌ 2ರಂದೇ ವಿಚಾರಣೆ ಮುಂದುವರೆಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.