ಮುರುಘಾ ಶರಣರಿಗೆ ನಿರ್ಬಂಧ: ನ್ಯಾಯಾಲಯದ ತೀರ್ಪು, ಸಂಸತ್‌, ಕಾನೂನು ಆಯೋಗದ ಪೂರ್ವ ನಿದರ್ಶನ ಸಲ್ಲಿಸಲು ಹೈಕೋರ್ಟ್‌ ಆದೇಶ

ಪೋಕ್ಸೊ ಪ್ರಕರಣದ ಆರೋಪಿ ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿರುವ ಪ್ರಕರಣ ಇದಾಗಿದೆ.
Murugha Mutt and Dr. Shivamurthy Murugha Sharanaru
Murugha Mutt and Dr. Shivamurthy Murugha Sharanaru

ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಅಡಿಯಲ್ಲಿ ಬಂಧನಕ್ಕೊಳಗಾಗುವ ಮಠದ ಪೀಠಾಧಿಪತಿಗಳ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿದ ಬಗ್ಗೆ ಯಾವುದಾದರೂ ಹೈಕೋರ್ಟ್‌, ಸುಪ್ರೀಂ ಕೋರ್ಟ್‌, ಸಂಸತ್ತಿನ ಚರ್ಚೆ ಇಲ್ಲವೇ ಕಾನೂನು ಆಯೋಗಗಳು ನೀಡಿರುವ ಅಭಿಪ್ರಾಯ, ತೀರ್ಪು, ವರದಿ ಮುಂತಾದ ಪೂರ್ವ ನಿದರ್ಶನಗಳನ್ನು ಹಾಜರುಪಡಿಸುವಂತೆ ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಮುರುಘಾ ಶರಣರ ಪರ ವಕೀಲರಿಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ಪೋಕ್ಸೊ, ಅತ್ಯಾಚಾರ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಮುರುಘಾ ಶರಣರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು, ತನಿಖಾಧಿಕಾರಿ ನ್ಯಾಯಾಲಯಕ್ಕೆ ಕೇವಲ ಅಂತಿಮ ವರದಿ ಸಲ್ಲಿಸಿದ್ದಾರೆ. ಈ ವರದಿ ಆಧರಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿ ಅಧಿಕಾರ ನಿರ್ಬಂಧಿಸುವಂತೆ ಕೋರಿರುವುದು ಮತ್ತು ಇದನ್ನು ಮಾನ್ಯ ಮಾಡಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ–1988ರ ಸೆಕ್ಷನ್‌ 8 (2)ರ ಅನ್ವಯ ಶರಣರು ತಮ್ಮ ಅಧಿಕಾರ ಚಲಾಯಿಸಲು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧ ವಿಧಿಸಿರವುದು ಸಂಪೂರ್ಣ ಕಾನೂನು ಬಾಹಿರ ಎಂದು ಪ್ರತಿಪಾದಿಸಿದರು. ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com