ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ) ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ಜಾಮೀನು ಅರ್ಜಿಯನ್ನು, ಈ ಹಿಂದೆ ವಿಚಾರಣೆ ನಡೆಸಿದ ಪೀಠ ವಿಚಾರಣೆ ನಡೆಸುವುದು ಸೂಕ್ತ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ವಕೀಲ ಸಂದೀಪ್ ಪಾಟೀಲ್ ಅವರ ಮೂಲಕ ಸಲ್ಲಿಕೆಯಾಗಿರುವ ಜಾಮೀನು ಅರ್ಜಿಯು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ವಾದ ಆಲಿಸಿದ ಪೀಠವು ಆರೋಪ ಪಟ್ಟಿ ಸಲ್ಲಿಸುವುದಕ್ಕೂ ಮುನ್ನ ಅರ್ಜಿದಾರರು ಹೈಕೋರ್ಟ್‌ನಲ್ಲಿ ಜಾಮೀನು ಕೋರಿದ್ದರು. ಈ ಅರ್ಜಿಯ ವಿಚಾರಣೆಯ ಹಂತದಲ್ಲಿ ಹಿಂಪಡೆಯಲಾಗಿತ್ತು. ಈಗ ಮತ್ತೆ ಜಾಮೀನು ಕೋರಿರುವ ಅರ್ಜಿಯನ್ನು ಅದೇ ಪೀಠವು ನಡೆಸುವುದು ಸೂಕ್ತ. ಈ ನಿಟ್ಟಿನಲ್ಲಿ ರಿಜಿಸ್ಟ್ರಿಯು ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯವು ಸೂಚಿಸಿತು.
ವಕೀಲ ಸಂದೀಪ್ ಪಾಟೀಲ್ ಅವರು ಈ ಹಿಂದೆ ಜಾಮೀನು ಕೋರಲಾಗಿತ್ತು. ಕಾರಣಾಂತರಗಳಿಂದ ಅರ್ಜಿಯನ್ನು ಹಿಂಪಡೆಯಲಾಗಿತ್ತು. ಈಗ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಜಾಮೀನು ಕೋರಲಾಗಿದೆ. ಇದನ್ನು ಪುರಸ್ಕರಿಸಬೇಕು ಎಂದು ಕೋರಿದರು.
ಆಗ ಪೀಠವು ಈ ಅರ್ಜಿಯು ಹಿಂದೆ ಬೇರೊಂದು ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಈಗ ಅದೇ ಪೀಠ ಅರ್ಜಿ ನಡೆಸುವುದು ಸೂಕ್ತ ಎಂದಿತು.
2022ರಲ್ಲಿ ಮುರುಘಾ ಶರಣರ ಜಾಮೀನು ಅರ್ಜಿಯನ್ನು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಿತ್ತು. ಸರ್ಕಾರಕ್ಕೆ ನೋಟಿಸ್ ಸಹ ಆಗಿತ್ತು. ಈ ಮಧ್ಯೆ, ಸ್ವಾಮೀಜಿ ಪರ ವಕೀಲರು ಅರ್ಜಿ ಹಿಂಪಡೆದಿದ್ದನ್ನು ಇಲ್ಲಿ ನೆನೆಯಬಹುದು.
ಸ್ವಾಮೀಜಿ ಅವರ ವಿರುದ್ಧ ಎರಡು ಪೋಕ್ಸೊ ಪ್ರಕರಣ, ಎಸ್‌ಸಿ, ಎಸ್‌ಟಿ ಕಾನೂನಿನ ಅಡಿ ಪ್ರಕರಣ ದಾಖಲಾಗಿದೆ. ಈಗ ಮೊದಲ ಪ್ರಕರಣದಲ್ಲಿ ಜಾಮೀನು ಕೋರಲಾಗಿದೆ. 2022ರ ಸೆಪ್ಟೆಂಬರ್ 1ರಂದು ಮುರುಘಾ ಶರಣರು ಪೊಲೀಸರಿಗೆ ಶರಣಾಗಿದ್ದರು.