ಪೋಕ್ಸೊ ಪ್ರಕರಣ: ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ ಹೈಕೋರ್ಟ್‌

ಜೈಲಿನಲ್ಲಿರುವ ಶರಣರನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ, ಇನ್ನಷ್ಟು ಸಮಯಾವಕಾಶ ನೀಡಬೇಕು. ಮುಂದಿನ ವಿಚಾರಣೆಯಲ್ಲಿ ಅರ್ಜಿ ವಾಪಸು ಪಡೆಯುವ ಕುರಿತು ಪೀಠಕ್ಕೆ ತಿಳಿಸಲಾಗುವುದು ಎಂದು ತಿಳಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru
Published on

ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರಕ್ಕೆ (ಡಿಸೆಂಬರ್‌ 16) ಮುಂದೂಡಿದೆ.

ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಜೈಲಿನಲ್ಲಿರುವ ಶಿವಮೂರ್ತಿ ಮುರುಘಾ ಶರಣರನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ, ಇನ್ನಷ್ಟು ಸಮಯಾವಕಾಶ ನೀಡಬೇಕು. ಮುಂದಿನ ವಿಚಾರಣೆಯಲ್ಲಿ ಅರ್ಜಿ ವಾಪಸು ಪಡೆಯುವ ಕುರಿತು ಪೀಠಕ್ಕೆ ತಿಳಿಸಲಾಗುವುದು” ಎಂದರು.

ಸೋಮವಾರವಷ್ಟೇ (ಡಿಸೆಂಬರ್‌ 12) ಪ್ರಕರಣದ ಸಂತ್ರಸ್ತೆ ಪರ ಹಾಜರಾಗಲು ಸಂತ್ರಸ್ತೆಯ ತಂದೆ ಪರವಾಗಿ ವಕೀಲ ಎಂ ಎಂ ಪ್ರಶಾಂತ್‌ ವಕಾಲತ್ತು ಸಲ್ಲಿಸಿದ್ದರು. ಆದರೆ, ಇದಕ್ಕೆ ಒಡನಾಡಿ ಸಂಸ್ಥೆಯ ಪರ ವಕೀಲ ಡಿ ಸಿ ಶ್ರೀನಿವಾಸ್ ಆಕ್ಷೇಪ ಎತ್ತಿದ್ದರು. ಮಂಗಳವಾರ ಈ ಕುರಿತಂತೆ ಜಿಜ್ಞಾಸೆ ವ್ಯಕ್ತಪಡಿಸಿದ ಪೀಠವು ಸಂತ್ರಸ್ತೆಯರನ್ನು ಪ್ರತಿನಿಧಿಸಲು ಒಡನಾಡಿ ಹೇಗೆ ಕಾನೂನುಬದ್ಧ ಪೋಷಕನಾಗಲು ಸಾಧ್ಯ ಎಂಬ ಪ್ರಶ್ನೆ ಮುಂದಿಟ್ಟಿತು. ಇದಕ್ಕೆ ಪ್ರತಿಕ್ರಿಯಿಸಿದ ನಾಗೇಶ್‌ ಅವರು ನ್ಯಾಯಾಲಯದ ಮೂಲಕವೇ ಕಾನೂನುಬದ್ಧ ಪೋಷಕರನ್ನು ನೇಮಕ ಮಾಡಬಹುದು ಎಂಬ ಸಲಹೆ ನೀಡಿದರು.

ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ ತಕ್ಷಣವೇ ಶಿವಮೂರ್ತಿ ಶರಣರು ಜಾಮೀನು ಕೋರಿ ಚಿತ್ರದುರ್ಗ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಷನ್ಸ್ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದಲ್ಲಿ ತನಿಖಾಧಿಕಾರಿಗಳು ವಿಚಾರಣಾಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೀಗಾಗಿ, ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ವಿಶೇಷ ಕ್ರಿಮಿನಲ್‌ ಪ್ರಕರಣವಾದ ಕಾರಣ ಪುನಾ ಹೊಸದಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಅರ್ಜಿದಾರರ ವಕೀಲರು ಈಗಾಗಲೇ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದ ಈ ಮೊದಲಿನ ಜಾಮೀನು ಅರ್ಜಿ ಮಾರ್ಪಾಡು ಮಾಡಿ ವಿಚಾರಣೆಗೆ ಪರಿಗಣಿಸುವಂತೆ ಕೋರಿದ್ದರು.

Also Read
ಮುರುಘಾ ಶ್ರೀ ಜಾಮೀನು ಪ್ರಕರಣ: ಸಂತ್ರಸ್ತ ಬಾಲಕಿಯರ ಪರ ವಕಾಲತ್ತಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ಹೈಕೋರ್ಟ್‌

ಈ ಕೋರಿಕೆಗೆ ಪೀಠವು ಒಂದು ವೇಳೆ ಹೈಕೋರ್ಟ್ ನಿಮ್ಮ ಈ ಅರ್ಜಿಯನ್ನು ತಿರಸ್ಕರಿಸಿದರೆ ನೀವು ಸುಪ್ರೀಂ ಕೋರ್ಟ್‌ನಲ್ಲೇ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ಆದ್ದರಿಂದ, ಸೆಷನ್ಸ್‌ ನ್ಯಾಯಾಲಯದಲ್ಲೇ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿ. ಒಂದು ವೇಳೆ ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ತಿರಸ್ಕರಿಸಿದರೆ ಕಡೇ ಪಕ್ಷ ಹೈಕೋರ್ಟ್‌ನಲ್ಲಾದರೂ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಮೌಖಿಕವಾಗಿ ಹೇಳಿತು.

ಇದಕ್ಕೆ ನಾಗೇಶ್‌ ಅವರು ಅರ್ಜಿದಾರರನ್ನು ಕೇಳಿ ಪೀಠಕ್ಕೆ ಈ ಕುರಿತಂತೆ ಅಭಿಪ್ರಾಯ ತಿಳಿಸಲಾಗುವುದು. ಒಂದು ವೇಳೆ ಈ ಸಲಹೆಗೆ ಒಪ್ಪಿದರೆ ಅರ್ಜಿ ವಾಪಸು ಪಡೆಯಲಾಗುವುದು. ಅದಕ್ಕಾಗಿ ಇನ್ನಷ್ಟು ಕಾಲಾವಕಾಶ ಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com