ಪೋಕ್ಸೊ ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿ ಬಂಧಿತರಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ತಮ್ಮ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯರ ಪರವಾಗಿ ಹಾಕಲಾಗಿರುವ ವಕಾಲತ್ತಿನ ಕಾನೂನು ಬದ್ಧತೆಯನ್ನು ಶುಕ್ರವಾರ ಪ್ರಶ್ನಿಸಿದ್ದಾರೆ.
ಮುರುಘಾ ಶರಣರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರ ಶರಣರನ್ನು ಪ್ರತಿನಿಧಿಸಿದ್ದ ವಕೀಲೆ ಸ್ವಾಮಿನಿ ಗಣೇಶ್ ಅವರು “ಸಂತ್ರಸ್ತ ಹೆಣ್ಣು ಮಕ್ಕಳ ಪರವಾಗಿ ಮಣಿ ಎಂಬುವರು ವಕಾಲತ್ತು ಹಾಕಿದ್ದಾರೆ. ತಾವು ಬಾಲಕಿಯರ ಪೋಷಕರು ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಈ ವಕಾಲತ್ತಿಗೆ ಸಂತ್ರಸ್ತ ಬಾಲಕಿಯರು ಒಪ್ಪಿಗೆ ನೀಡಿರುವ ಬಗ್ಗೆ ಅಧಿಕೃತ ದಾಖಲೆಯಿಲ್ಲ. ಈ ಕುರಿತು ಲಿಖಿತ ಆಕ್ಷೇಪಣೆ ಸಲ್ಲಿಕೆಗೆ ಸಮಯಾವಕಾಶ ನೀಡಬೇಕು" ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ಪೀಠವು ಒಂದು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.