ಅತ್ಯಾಚಾರ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಶಿವಮೂರ್ತಿ ಶರಣರು; ಸರ್ಕಾರಕ್ಕೆ ನೋಟಿಸ್‌ ಜಾರಿ

ಜಾಮೀನು ಅರ್ಜಿಯ ವಿಚಾರಣೆ ನಡೆಸಿ, ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ನೇತೃತ್ವದ ಏಕಸದಸ್ಯ ಪೀಠ.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru
Published on

ಮಠದ ವಸತಿ ನಿಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಜಾಮೀನು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ನ್ಯಾಯಾಂಗ ಬಂಧನದಲ್ಲಿರುವ ಶರಣರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಚಿತ್ರದುರ್ಗ ಗ್ರಾಮೀಣ ಪೊಲೀಸರು, ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಿ ಚಂದ್ರಕುಮಾರ್‌ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.

ವಕೀಲ ಸಂದೀಪ್‌ ಎಸ್‌. ಪಾಟೀಲ್‌ ಅವರ ಮೂಲಕ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಸೆಪ್ಟೆಂಬರ್‌ 23ರಂದು ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಮುರುಘಾ ಶರಣರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

Also Read
ಪೋಕ್ಸೊ ಪ್ರಕರಣ: ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕರಿಸಿದ ಚಿತ್ರದುರ್ಗದ ವಿಶೇಷ ನ್ಯಾಯಾಲಯ

ಆಗಸ್ಟ್‌ 26ರಂದು ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್‌), 6 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 376(2)(ಎನ್‌), 376(3), 149 ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ. ಅಲ್ಲದೇ, ಅಲ್ಲಿ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್‌), 6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(3), 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಮೂಲನೆ) ಕಾಯಿದೆ ಸೆಕ್ಷನ್‌ಗಳಾದ 3(1) (ಡಬ್ಲ್ಯು) (1)(2), 3(2) (V) ಅಡಿ ಪ್ರಕರಣ ದಾಖಲಿಸಲಾಗಿದೆ.

ಮತ್ತೊಂದು ಎಫ್‌ಐಆರ್‌

ಈ ಮಧ್ಯೆ, ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮತ್ತಿಬ್ಬರು ವಿದ್ಯಾರ್ಥಿಯರು ನೀಡಿದ ದೂರನ್ನು ಆಧರಿಸಿ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಏಳು ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಮುರುಘಾ ಶರಣರು, ಹಾಸ್ಟೆಲ್ ವಾರ್ಡನ್ ರಶ್ಮಿ, ಬಸವಾದಿತ್ಯ, ಪರಮಶಿವಯ್ಯ, ಗಂಗಾಧರ, ಮಹಾಲಿಂಗ ಮತ್ತು ಕರಿಬಸಪ್ಪ ಅವರನ್ನು ಕ್ರಮವಾಗಿ ಒಂದರಿಂದ ಏಳನೇ ಆರೋಪಿಗಳನ್ನಾಗಿಸಲಾಗಿದೆ.

ಸ್ವಾಮೀಜಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯರ ತಾಯಿಯು ದೂರು ನೀಡಿದ್ದಾರೆ. ಪತಿ ತನ್ನನ್ನು ತೊರೆದ ಬಳಿಕ ಮಕ್ಕಳನ್ನು ಮಠಕ್ಕೆ ಒಳಪಟ್ಟಿರುವ ಎಸ್‌ಜೆಎಂ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದೆ. ಹಿರಿಯ ಮಗಳನ್ನು 3ನೇ ತರಗತಿ ಮತ್ತು ಎರಡನೇ ಪುತ್ರಿಯನ್ನು 1ನೇ ತರಗತಿಗೆ ಸೇರಿಸಲಾಗಿತ್ತು. 2020ರಿಂದ ಶಿವಮೂರ್ತಿ ಶರಣರು ನಿರಂತರವಾಗಿ ಮಕ್ಕಳ ಮೇಲೆ ಇತರ ಆರೋಪಿಗಳ ಸಹಕಾರದೊಂದಿಗೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು. ಒಡನಾಡಿ ಸಂಸ್ಥೆಯನ್ನು ಮಕ್ಕಳು ಮತ್ತು ತಾಯಿ ಸಂಪರ್ಕಿಸಿದ್ದರು. ಆನಂತರ ಒಡನಾಡಿ ಸಂಸ್ಥೆಯ ಪದಾಧಿಕಾರಿಗಳು ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ಎದುರು ಹಾಜರುಪಡಿಸಿದ್ದರು. ಇವರ ನೆರವಿನಿಂದ ನಜರಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com