A1
ಸುದ್ದಿಗಳು

ಮುಸ್ಲಿಂ ಹುಡುಗಿ 15 ವರ್ಷ ತುಂಬಿದ ನಂತರ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಅರ್ಹಳು: ಪಂಜಾಬ್‌ ಹೈಕೋರ್ಟ್

ಮುಸ್ಲಿಂ ಹುಡುಗಿಯ ವಿವಾಹ ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ,15 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಹುಡುಗಿ ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಳ್ಳಲು ಅರ್ಹಳು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಗುಲಾಮ್ ದೀನ್ ಮತ್ತು ಪಂಜಾಬ್ ಸರ್ಕಾರ ನಡುವಣ ಪ್ರಕರಣ].

ಪರಸ್ಪರ ಪ್ರೀತಿಸಿ ಮುಸ್ಲಿಂ ಸಂಪ್ರದಾಯಗಳು ಮತ್ತು ವಿಧಿವಿಧಾನಗಳ ಪ್ರಕಾರ ವಿವಾಹವಾದ ಮುಸ್ಲಿಂ ದಂಪತಿಯ ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

“ವಿವಿಧ ತೀರ್ಪುಗಳಲ್ಲಿ ತಿಳಿಸಿರುವಂತೆ, ಮುಸ್ಲಿಂ ಹುಡುಗಿಯ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿತ ಎಂಬುದು ಸ್ಪಷ್ಟ. 'ಸರ್ ದಿನ್ಶಾ ಫರ್ದುಂಜಿ ಮುಲ್ಲಾ ಅವರ ಮೊಹಮ್ಮದೀಯ ಕಾನೂನಿನ ತತ್ವಗಳು' ಎಂಬ ಪುಸ್ತಕದ 195ನೇ ವಿಧಿ ಪ್ರಕಾರ, ಎರಡನೇ ಅರ್ಜಿದಾರರು (ಮುಸ್ಲಿಂ ಹುಡುಗಿ) 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಆಕೆ ತಮ್ಮ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಳ್ಳಲು ಅರ್ಹಳು” ಎಂದು ನ್ಯಾಯಾಲಯ ತಿಳಿಸಿದೆ.

“ಅರ್ಜಿದಾರರ ಆತಂಕ ನಿವಾರಿಸಬೇಕು ಎಂಬ ವಿಚಾರದಲ್ಲಿ ನ್ಯಾಯಾಲಯ ಕಣ್ಣು ಮುಚ್ಚಿ ಕೂರುವಂತಿಲ್ಲ. ಅರ್ಜಿದಾರರು ತಮ್ಮ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದ ಮಾತ್ರಕ್ಕೆ ಸಂವಿಧಾನದಲ್ಲಿ ಕಲ್ಪಿಸಿರುವ ಮೂಲಭೂತ ಹಕ್ಕುಗಳಿಂದ ಅವರನ್ನು ವಂಚಿತರನ್ನಾಗಿ ಮಾಡಲು ಸಾಧ್ಯವಿಲ್ಲ, ”ಎಂದು ನ್ಯಾ. ಬೇಡಿ ಹೇಳಿದರು.

ಈ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿಯನ್ನು ನಿರ್ಧರಿಸಿ ಆ ಪ್ರಕಾರ ಕ್ರಮ ಕೈಗೊಳ್ಳುವಂತೆ ಪಠಾಣ್‌ಕೋಟ್‌ನ ಹಿರಿಯ ಪೊಲೀಸ್ ಅಧೀಕ್ಷಕರಿಗೆ ನ್ಯಾಯಾಲಯ ಸೂಚಿಸಿತು.