ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಸಂಬಂಧಿಸಿದ ಕೆಸರೆ ಗ್ರಾಮದಲ್ಲಿನ ಆಕ್ಷೇಪಾರ್ಹವಾದ 3.16 ಎಕರೆ ಜಮೀನಿನ ಮೂಲ ಮಾಲೀಕ ಜವರ ಉರುಫ್ ನಿಂಗ ಅವರ ಮೊಮ್ಮಗಳು ಸಲ್ಲಿಸಿರುವ ದಾವೆಯ ಸಂಬಂಧ ಸಿಎಂ ಪತ್ನಿ ಬಿ ಎಂ ಪಾರ್ವತಿ ಸೇರಿದಂತೆ 12 ಮಂದಿಯ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಲು ಮೈಸೂರಿನ ಜಿಲ್ಲಾ ನ್ಯಾಯಾಲಯ ಈಚೆಗೆ ನಿರಾಕರಿಸಿದೆ.
ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ ಮೂಲ ಮಾಲೀಕರಾದ ಜವರ ಉರುಫ್ ನಿಂಗ ಅವರ ಹಿರಿಯ ಪುತ್ರ ಮೈಲಾರಯ್ಯನ ಹಿರಿಯ ಪುತ್ರಿ ಜಮುನಾ ಸಲ್ಲಿಸಿರುವ ಮೂಲ ದಾವೆಯ ಭಾಗವಾದ ಎರಡು ಮಧ್ಯಂತರ ಅರ್ಜಿಗಳ ವಿಚಾರಣೆಯನ್ನು ಏಳನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಬಿ ಎಚ್ ಕಾವ್ಯಾ ಅವರು ವಿಚಾರಣೆ ನಡೆಸಿದ್ದಾರೆ.
“ಫಿರ್ಯಾದಿ ಜಮುನಾ ಅವರು ದಾವೆ ಇತ್ಯರ್ಥವಾಗುವವರೆಗೆ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ ಜಮೀನನ್ನು ಪರಭಾರೆ ಮಾಡದಂತೆ ಪ್ರತಿವಾದಿಗಳ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಮಧ್ಯಂತರ ಅರ್ಜಿಗಳ್ನು ಸಲ್ಲಿಸಿದ್ದಾರೆ. ಅಲ್ಲದೇ, ಮುಡಾ ಆಯುಕ್ತರು ಮತ್ತು ಅವರ ಸೂಚನೆಯಲ್ಲಿ ಕೆಲಸ ಮಾಡುವವರು ಆಕ್ಷೇಪಾರ್ಹವಾದ ಭೂಮಿಯಲ್ಲಿ ದಾವೆ ಇತ್ಯರ್ಥವಾಗುವವರೆಗೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಂತೆ ಏಕಪಕ್ಷೀಯ ಆದೇಶ ಮಾಡಬೇಕು ಎಂದು ಕೋರಿದ್ದಾರೆ. ಈ ಸಂಬಂಧ ಫಿರ್ಯಾದಿ ಪರ ವಕೀಲ ವಾದವನ್ನು ಆಲಿಸಲಾಗಿದ್ದು, ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಎಲ್ಲಾ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಪ್ರತಿವಾದಿಗಳನ್ನು ಆಲಿಸದೇ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡುವ ಆಧಾರ ಕಾಣುತ್ತಿಲ್ಲ. ಹೀಗಾಗಿ, ಪ್ರತಿವಾದಿಗಳಿಗೆ ಸಮನ್ಸ್ ಮತ್ತು ನೋಟಿಸ್ ಜಾರಿ ಮಾಡಲು ಆದೇಶಿಸಲಾಗಿದೆ” ಎಂದು ನ್ಯಾಯಾಲಯವು ನವೆಂಬರ್ 20ರ ಆದೇಶದಲ್ಲಿ ಹೇಳಿದೆ. ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿದೆ.
ಜಮುನಾ ಅವರು ಅರ್ಜಿಯಲ್ಲಿ ತಮ್ಮನ್ನು ವಂಶವೃಕ್ಷದಿಂದ ಕೈಬಿಡಲಾಗಿದೆ. ಅಲ್ಲದೇ, ಭೂಮಿ ಮಾರಾಟದಲ್ಲಿ ನಮ್ಮ ಪಾಲು ನೀಡಲಾಗಿಲ್ಲ ಎಂದು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ಎಂ ಮಂಜುನಾಥ ಸ್ವಾಮಿ, ಜೆ ದೇವರಾಜು, ಎಂ ಸರೋಜಮ್ಮ,ಡಿ ಶೋಭಾ, ಡಿ ದಿನಕರ್ ರಾಜ್, ಡಿ ಪ್ರಭಾ, ಡಿ ಪ್ರತಿಭಾ, ಡಿ ಶಶಿಧರ್, ಬಿ ಎಂ ಮಲ್ಲಿಕಾರ್ಜುನ ಸ್ವಾಮಿ, ಡಿ ಎಂ ಪಾರ್ವತಿ, ಮುಡಾ ಆಯುಕ್ತರು ಮತ್ತು ಮೈಸೂರು ಜಿಲ್ಲಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿದಾರೆ ಜಮುನಾ ಪರವಾಗಿ ಇಂದ್ರಶೇಖರ್ ವಕಾಲತ್ತು ಹಾಕಿದ್ದಾರೆ.
ಪ್ರಕರಣದ ಹಿನ್ನೆಲೆ: ಜಮೀನಿನ ಮೂಲ ಮಾಲೀಕ ನಿಂಗ ಅವರಿಗೆ ದೇವರಾಜು, ಮೈಲಾರಯ್ಯ ಮತ್ತು ಮಲ್ಲಯ್ಯ ಹೆಸರಿನ ಮೂವರು ಪುತ್ರರು. ಜಮುನಾ ಅವರು ಮೈಲಾರಯ್ಯ ಅವರ ಪುತ್ರಿ. ಮೈಸೂರು ತಾಲ್ಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿ ಈ ಕುಟುಂಬಕ್ಕೆ ಸೇರಿದ್ದ 3 ಎಕರೆ 16 ಗುಂಟೆ ಇದ್ದು, ಆ ಜಮೀನನ್ನು ಮಾಲೀಕರಾದ ಜೆ ದೇವರಾಜು 2004ರಲ್ಲಿ ಸಿದ್ದರಾಮಯ್ಯ ಬಾಮೈದ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಾಟ ಮಾಡಿದ್ದರು. 2010ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಇದೇ ಜಮೀನನ್ನು ತನ್ನ ಸಹೋದರಿ, ಸಿದ್ದರಾಮಯ್ಯರ ಪತ್ನಿ ಬಿ ಎಂ ಪಾರ್ವತಿ ಅವರಿಗೆ ದಾನಪತ್ರದ ರೂಪದಲ್ಲಿ ವರ್ಗಾಯಿಸಿದ್ದರು.
ಈ ನಡುವೆ ಈ ಜಮೀನನ್ನು ಮುಡಾ ವಶಪಡಿಸಿಕೊಂಡು ಬಡಾವಣೆ ನಿರ್ಮಿಸಿದ್ದು, ಅದಕ್ಕೆ ಪರಿಹಾರವಾಗಿ ಪಾರ್ವತಿ ಅವರಿಗೆ ಒಟ್ಟು 38 ಸಾವಿರ ಚದರ ಅಡಿ ಅಳತೆಯ 14 ನಿವೇಶನಗಳನ್ನು ಮಂಜೂರು ಮಾಡಿತ್ತು. ವಿವಾದದ ಬಳಿಕ 14 ಬದಲಿ ನಿವೇಶನಗಳನ್ನು ಪಾರ್ವತಿ ಮುಡಾಕ್ಕೆ ವಾಪಸ್ ನೀಡಿದ್ದರು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಲ್ಲದೇ, ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರ ಇರುವುದರಿಂದ ಅವರ ವಿರುದ್ಧವೂ ತನಿಖೆ ನಡೆಸಬೇಕು. ಇದಕ್ಕೆ ರಾಜ್ಯಪಾಲರು ಅನುಮತಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ, ಟಿ ಜೆ ಅಬ್ರಹಾಂ ಮತ್ತು ಪ್ರದೀಪ್ ಕುಮಾರ್ ಅವರು ಕೋರಿದ್ದರು. ಈ ಮನವಿಯನ್ನು ರಾಜ್ಯಪಾಲರು ಪುರಸ್ಕರಿಸಿದ್ದರು. ಇದನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಎತ್ತಿ ಹಿಡಿದಿದೆ. ಈಗ ಅದನ್ನು ಸಿದ್ದರಾಮಯ್ಯ ಮತ್ತು ಜೆ ದೇವರಾಜು ಅವರು ಮೇಲ್ಮನವಿಯ ಮೂಲಕ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದ್ದಾರೆ. ಅದರ ವಿಚಾರಣೆಯು ಡಿಸೆಂಬರ್ 5ರಂದು ನಡೆಯಲಿದೆ.
ಇನ್ನೊಂದೆಡೆ, ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯೂ ಏಕಸದಸ್ಯ ಪೀಠದ ಮುಂದೆ ಡಿಸೆಂಬರ್ 10ಕ್ಕೆ ವಿಚಾರಣೆಗೆ ಬರಲಿದೆ. ಇದನ್ನೂ ಪ್ರಶ್ನಿಸಿ ದೇವರಾಜು ಅವರು ಪ್ರತ್ಯೇಕವಾಗಿ ಹೈಕೋರ್ಟ್‌ನ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. ಇದರ ವಿಚಾರಣೆಯೂ ಡಿಸೆಂಬರ್ 5ಕ್ಕೆ ವಿಚಾರಣೆಗೆ ಬರಲಿದೆ.