Supreme Court
Supreme Court 
ಸುದ್ದಿಗಳು

ಬೇರೆ ರಾಜ್ಯಗಳ ಲಾಟರಿ ನಿಯಂತ್ರಿಸುವ ಕೇರಳ ಸರ್ಕಾರದ ನಿಯಮ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ನಾಗಾಲ್ಯಾಂಡ್; ನೋಟಿಸ್ ಜಾರಿ

Bar & Bench

ಕೇರಳದಲ್ಲಿ ಬೇರೆ ರಾಜ್ಯಗಳು ನಡೆಸುವ ಲಾಟರಿಗಳನ್ನು ನಿಯಂತ್ರಣಕ್ಕೆ ತರುವ ನಿಯಮಾವಳಿಗಳ ಸಿಂಧುತ್ವ ಪ್ರಶ್ನಿಸಿ ನಾಗಾಲ್ಯಾಂಡ್ ಸರ್ಕಾರ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇರಳ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದ ಆಲಿಸಿದ ನಂತರ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ಕೇರಳ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

ಕೇರಳ ಕಾಗದ ಲಾಟರಿಗಳ (ನಿಯಂತ್ರಣ) ತಿದ್ದುಪಡಿ ನಿಯಮಾವಳಿ- 2018ರ ಸಿಂಧುತ್ವವನ್ನು ಇತ್ತೀಚೆಗೆ ಎತ್ತಿಹಿಡಿದಿದ್ದ ಕೇರಳ ಹೈಕೋರ್ಟ್‌ ತೀರ್ಪನ್ನು ಅರ್ಜಿ ಪ್ರಶ್ನಿಸಿದೆ. ಇತರೆ ರಾಜ್ಯಗಳು ನಡೆಸುವ ಲಾಟರಿಗಳ ಮೇಲ್ವಿಚಾರಣೆ ನಡೆಸಲು ಮತ್ತು ದಂಡ ವಿಧಿಸಲು ಕೇರಳ ಸರ್ಕಾರದ ನಿಯಮಾವಳಿಗಳು ಅನುವು ಮಾಡಿಕೊಡುತ್ತವೆ.

ಇದನ್ನು ಪ್ರಶ್ನಿಸಿರುವ ನಾಗಾಲ್ಯಾಂಡ್‌ ಸರ್ಕಾರ, “ನಿಯಮಗಳು ಸಂವಿಧಾನದಲ್ಲಿ ಕಲ್ಪಿಸಿರುವ ಒಕ್ಕೂಟ ಎಂಬ ಮೂಲಭೂತ ಪರಿಕಲ್ಪನೆಗೆ ವಿರುದ್ಧವಾಗಿದ್ದು ಲಾಟರಿ (ನಿಯಂತ್ರಣ) ಕಾಯಿದೆ ಮತ್ತು ನಿಯಮಗಳ ನೇರ ಉಲ್ಲಂಘನೆಯಾಗಿದೆ. ಹೈಕೋರ್ಟ್‌ ತೀರ್ಪು ರಾಜ್ಯದೊಳಗೆ ಕೇರಳ ಸರ್ಕಾರ ಲಾಟರಿ ಮಾರಾಟದ ಏಕಸ್ವಾಮ್ಯತೆ ಸಾಧಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಸುಪ್ರೀಂ ಕೋರ್ಟ್‌ ʼರಾಜ್ಯವೊಂದು ಲಾಟರಿ ಮುಕ್ತ ವಲಯವಾಗದ ಹೊರತು ಅದು ನೇರವಾಗಿ ಇಲ್ಲವೇ ಪರೋಕ್ಷವಾಗಿ ತನ್ನ ನೆಲದಲ್ಲಿ ಇತರೆ ರಾಜ್ಯಗಳು ನಡೆಸುವ ಲಾಟರಿಗಳನ್ನು ತಡೆಯುವ/ನಿರ್ಬಂಧಿಸುವ/ನಿಯಂತ್ರಿಸುವ/ಕಡಿವಾಣ ಹಾಕುವ ಕ್ರಮಗಳಿಗೆ ಮುಂದಾಗುವಂತಿಲ್ಲ ಎಂದು ಹೇಳಿರುವುದಾಗಿ ತಿಳಿಸಿದೆ.