ಸುದ್ದಿಗಳು

12 ವರ್ಷದ ಮಗುವಿನ ಬಟ್ಟೆ ತೆಗೆಯದೆ ಸ್ಪರ್ಶಿಸಿದರೆ ಪೊಕ್ಸೊ ಕಾಯಿದೆಯಡಿ ಲೈಂಗಿಕ ಅಪರಾಧವಲ್ಲ: ಬಾಂಬೆ ಹೈಕೋರ್ಟ್

ಪೊಕ್ಸೊ ಕಾಯಿದೆಯಡಿ ಖುಲಾಸೆಗೊಂಡರೂ ಸೆಕ್ಷನ್ 354 ರ ಅಡಿ ತಪ್ಪಿತಸ್ಥನಾಗಿರುವ ಅಪರಾಧಿಯ ಜಾಮೀನನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡಿತಲ್ಲದೆ ಅವನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತು.

Bar & Bench

12 ವರ್ಷದ ಹುಡುಗಿಯ ಬಟ್ಟೆ ತೆಗೆಯದೆ ಆಕೆಯ ಸ್ತನ ಸ್ಪರ್ಶಿಸಿದರೆ ಅದನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ (ಪೊಕ್ಸೊ) ಸೆಕ್ಷನ್ 7ರ ಅಡಿ ಲೈಂಗಿಕ ದೌರ್ಜನ್ಯ ಎಂದು ವ್ಯಾಖ್ಯಾನಿಸಲಾಗದು ಎಂದು ಬಾಂಬೆ ಹೈಕೋರ್ಟ್‌ ತೀರ್ಪು ನೀಡಿದೆ. ಆದರೆ ಇದು ಮಹಿಳೆಯ ಘನತೆಗೆ ಧಕ್ಕೆ ತರುವುದನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ ವ್ಯಾಪ್ತಿಗೆ ಬರುತ್ತದೆ ಎಂದು ಬಾಂಬೆ ಹೈಕೋರ್ಟ್‌ ತೀರ್ಪು ನೀಡಿದೆ.

ಪೊಕ್ಸೊ ಕಾಯಿದೆಯ ಸೆಕ್ಷನ್‌ 8ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರಿಗೆ 3-5 ವರ್ಷ ಶಿಕ್ಷೆ ವಿಧಿಸಬಹುದಾಗಿದ್ದರೆ ಐಪಿಸಿ ಸೆಕ್ಷನ್‌ 354 ರ ಅಡಿಯಲ್ಲಿ ಜೈಲು ಶಿಕ್ಷೆಯ ಅವಧಿ 1-5 ವರ್ಷಗಳು. ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಹೊರಡಿಸಿದ ತೀರ್ಪಿನ ವಿವರ ಹೀಗಿದೆ:

“12 ವರ್ಷ ವಯಸ್ಸಿನ ಮಗುವಿನ ಸ್ತನವನ್ನು ಸ್ಪರ್ಶಿಸುವಾಗ ಆಕೆಯ ಮೇಲುಡುಗೆಯನ್ನು ತೆಗೆದುಹಾಕಲಾಗಿದೆಯೇ ಅಥವಾ ಆರೋಪಿ ತನ್ನ ಕೈಯನ್ನು ಉಡುಗೆಯ ಒಳಗೆ ಸರಿಸಿ ಅವಳ ಸ್ತನ ಸ್ಪರ್ಶಿಸಿದ್ದಾನೆಯೇ ಎಂಬ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳು ಇಲ್ಲದಿರುವುದರಿಂದ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ. ಇದು ಖಂಡಿತವಾಗಿಯೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ರ ಅಡಿಯಲ್ಲಿ ಅಪರಾಧದ ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತದೆ.”
ಬಾಂಬೆ ಹೈಕೋರ್ಟ್‌ ನಾಗಪುರ ಪೀಠ

ಆದ್ದರಿಂದ ನ್ಯಾಯಮೂರ್ತಿ ಪುಷ್ಪಾ ವಿ ಗಣದೇವಾಲಾ ಅವರು ಪೊಕ್ಸೊ ಕಾಯಿದೆಯ ಸೆಕ್ಷನ್ 8ರ (ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ವ್ಯಕ್ತಿಯನ್ನು ಖುಲಾಸೆಗೊಳಿಸಿದ್ದಾರೆ. ಆದರೆ, ಐಪಿಸಿಯ ಸೆಕ್ಷನ್ 354 (ಕ್ರಿಮಿನಲ್ ಬಲಪ್ರಯೋಗ) ಮತ್ತು 342 (ಅಕ್ರಮ ಬಂಧನ) ಅಡಿಯಲ್ಲಿ ಆರೋಪಿಯ ಅಪರಾಧವನ್ನು ಕಾಯ್ದುಕೊಳ್ಳಲಾಗಿದೆ.

ಪೊಕ್ಸೊ ಕಾಯಿದೆಯಡಿ ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ “ಸಂತ್ರಸ್ತೆಯ ಮೇಲುಡುಗೆಯನ್ನು ತೆಗೆದುಹಾಕಿ ಆಕೆಯ ಸ್ತನ ಸ್ಪರ್ಶಿಸಿರುವ ಪ್ರಾಸಿಕ್ಯೂಷನ್‌ ಪ್ರಕರಣ ಇದಲ್ಲ. ಅಂದರೆ ಲೈಂಗಿಕ ಉದ್ದೇಶದಿಂದ ಚರ್ಮದಿಂದ ಚರ್ಮವನ್ನು ಸ್ಪರ್ಶಿಸುವ ದೈಹಿಕ ಸಂಪರ್ಕವೂ ಏರ್ಪಟ್ಟಿಲ್ಲ” ಎಂದು ತಿಳಿಸಿದೆ.

ಮೇಲ್ಮನವಿ ಸಲ್ಲಿಸಿರುವ ವ್ಯಕ್ತಿ ಸೀಬೆ ಹಣ್ಣು ಕೊಡುವ ನೆಪದಲ್ಲಿ ಹನ್ನೆರಡು ವರ್ಷದ ಹೆಣ್ಣುಮಗುವನ್ನು ತನ್ನ ಮನೆಗೆ ಕರೆದೊಯ್ದು ಆಕೆಯ ಸ್ತನಗಳನ್ನು ಸ್ಪರ್ಶಿಸಿದ್ದ ಮತ್ತು ಆಕೆಯ ಸಲ್ವಾರ್‌ ತೆಗೆಯಲು ಯತ್ನಿಸಿದ್ದ. ಆ ವೇಳೆಗೆ ಅಲ್ಲಿಗೆ ಬಂದ ಮಗುವಿನ ತಾಯಿ ಆಕೆಯನ್ನು ರಕ್ಷಿಸಿದ್ದಳು. ಪೊಕ್ಸೊ ಮತ್ತು ಐಪಿಸಿ ಸೆಕ್ಷನ್‌ ಕಾಯಿದೆಯಡಿ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಆದರೆ ಪೊಕ್ಸೊ ಕಾಯಿದೆಯಡಿ ಖುಲಾಸೆಗೊಂಡರೂ ಸೆಕ್ಷನ್ 354 ರ ಅಡಿ ತಪ್ಪಿತಸ್ಥನಾಗಿರುವ ಆತನ ಜಾಮೀನನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡಿತು. ಜೊತೆಗೆ ಆತನ ವಿರುದ್ಧ ಜಾಮೀನುರಹಿತ ವಾರೆಂಟ್‌ ಹೊರಡಿಸಿತು.