ಲೈಂಗಿಕ ಕಿರುಕುಳ ಪ್ರಕರಣ: ಪ್ರಿಯಾ ರಮಣಿ ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ಎಂ ಜೆ ಅಕ್ಬರ್‌ ಪರ ಲೂಥ್ರಾ ಪ್ರಖರ ವಾದ

ಕಟಕಟೆಯಲ್ಲಿರುವುದು ಅಕ್ಬರ್ ಅಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯವಾದಿ ಲೂಥ್ರಾ, ಕಳಂಕರಹಿತ ಸಾಕ್ಷ್ಯಗಳ ಮೂಲಕ ತಮ್ಮ ವಾದಕ್ಕೆ ಸಮರ್ಥನೆ ನೀಡಬೇಕಿರುವುದು ರಮಣಿ ಎಂದು ವಾದ ಮಂಡಿಸಿದರು.
Geeta Luthra (R)and MJ Akbar (L)
Geeta Luthra (R)and MJ Akbar (L)

ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ ಮಾಜಿ ಸಚಿವ ಎಂ ಜೆ ಅಕ್ಬರ್‌ ದಾಖಲಿಸಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಬರ್‌ ಪರ ವಾದಿಸಿದ ಹಿರಿಯ ವಕೀಲೆ ಗೀತಾ ಲೂಥ್ರಾ, “ಇದು ಲೈಂಗಿಕ ಕಿರುಕುಳ ಪ್ರಕರಣವಲ್ಲ” ಎಂದು ಮಂಗಳವಾರ ವಾದಿಸಿದರು.

2018ರಲ್ಲಿ ರಮಣಿ ಅವರು ಎಂ ಜೆ ಅಕ್ಬರ್‌ ವಿರುದ್ಧ ಮಾಡಿರುವ ಟ್ವೀಟ್‌ಗಳು ಮಾಜಿ ಸಚಿವರ ಘನತೆಗೆ ಚ್ಯುತಿ ಉಂಟು ಮಾಡಿವೆ ಎಂಬ ಏಕೈಕ ವಿಚಾರ ನ್ಯಾಯಾಲಯದ ಮುಂದಿದೆ ಎಂದು ಲೂಥ್ರಾ ಹೇಳಿದ್ದಾರೆ.

“ಅವರು (ರಮಣಿ) ತ್ಯಾಗದ ಬಗ್ಗೆ ಮಾತನಾಡುತ್ತಾರೆ. ಇದರ ಬಗ್ಗೆ ಮಾತನಾಡುವುದು ಸುಲಭ. ಇದು ನಾನು ದಾಖಲಿಸಿರುವ ಮಾನಹಾನಿ ಪ್ರಕರಣವಾಗಿದ್ದು, ಅವರು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವಲ್ಲ” ಎಂದು ಅಕ್ಬರ್‌ ಪರ ಲೂಥ್ರಾ ವಾದಿಸಿದರು.

ಕಟಕಟೆಯಲ್ಲಿರುವುದು ಅಕ್ಬರ್ ಅಲ್ಲ ಎಂದು ಸ್ಪಷ್ಟಪಡಿಸಿದ ಲುಥ್ರಾ, ಕಳಂಕರಹಿತ ಸಾಕ್ಷ್ಯಗಳ ಮೂಲಕ ರಮಣಿಯವರು ತಮ್ಮ ಸಮರ್ಥನೆ ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ.

“ಇದು ನನ್ನ ಪಾಲಿನ ಸತ್ಯ ಎಂದ ಮಾತ್ರಕ್ಕೆ ಅದು ಸತ್ಯವಾಗುವುದಿಲ್ಲ. ಆಕೆಗೆ (ರಮಣಿ) ಸತ್ಯ ಅಥವಾ ಪ್ರಾಮಾಣಿಕತೆಯ ಬಗ್ಗೆ ಗೌರವವಿಲ್ಲ” ಎಂದು ಲೂಥ್ರಾ ವಾದಿಸಿದರು. ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರವೀಂದ್ರ ಕುಮಾರ್‌ ಪಾಂಡೆ ಅವರ ಪೀಠದ ಮುಂದೆ ಲೂಥ್ರಾ ವಾದ ಮಂಡಿಸಿದರು.

ತಮ್ಮ ಪ್ರತ್ಯುತ್ತರ ವಾದದ ಸಂದರ್ಭದಲ್ಲಿ ಲೂಥ್ರಾ ಅವರು ಲೈಂಗಿಕ ಕಿರುಕುಳ ಆರೋಪ ಮಾಡಿದ ಇತರೆ ಮಹಿಳೆಯರ ವಿರುದ್ಧ ಕ್ರಿಮಿನಲ್ ಕ್ರಮಗಳ ಅನುಪಸ್ಥಿತಿಯು ಪ್ರಸ್ತುತ ವಿಚಾರಣೆಯಲ್ಲಿ ಕಾನೂನು ರಕ್ಷಣೆಯಾಗಲು ಸಾಧ್ಯವಿಲ್ಲ ಎಂದು ತಕರಾರು ಎತ್ತಿದರು.

Also Read
ಲೈಂಗಿಕ ಕಿರುಕುಳ ಆರೋಪ ಮುಚ್ಚಿಡುವ ಮೂಲಕ ನ್ಯಾಯಾಲಯಕ್ಕೆ ಎಂ ಜೆ ಅಕ್ಬರ್‌ ವಂಚನೆ: ರಮಣಿ ಪರ ವಕೀಲೆ ರೆಬೆಕಾ ಜಾನ್‌ ಆರೋಪ

ರಮಣಿ ಉಲ್ಲೇಖಿಸಿರುವ, ಆಕೆಯ ಪರ ಸಾಕ್ಷಿಯಾದ ಘಜಾಲಾ ವಹಾಬ್‌ ಸೇರಿದಂತೆ ಯಾವೊಬ್ಬ ಮಹಿಳೆಯೂ ಎಂ ಜೆ ಅಕ್ಬರ್‌ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಿಲ್ಲ ಎಂದು ಲೂಥ್ರಾ ಬೊಟ್ಟು ಮಾಡಿದರು.

ಅಕ್ಬರ್‌ ಅವರು ನ್ಯಾಯಾಲಯಕ್ಕೆ ವಂಚಿಸಿದ್ದಾರೆ ಎಂಬ ವಾದಕ್ಕೆ ತಗಾದೆ ಎತ್ತಿದ ಲೂಥ್ರಾ, “ಅವರು 'ವಂಚನೆ' ಎಂಬ ಪದ ಬಳಸಿದ್ದಾರೆ. ಇದು ಮತ್ತೊಂದು ಮಾನಹಾನಿ ಪ್ರಕರಣವಾಗಬಹುದು.. ನಾನು ಗೌರವಾನ್ವಿತ ವ್ಯಕ್ತಿಯಾಗಿದ್ದು, ಆ ಕಾರಣಕ್ಕಾಗಿಯೇ ನಾನು (ಅಕ್ಬರ್) ಸಂಸತ್‌ ಸದಸ್ಯನಾಗಿದ್ದೇನೆ” ಎಂದರು.

ಅಕ್ಬರ್‌ ತಮ್ಮ “ವೃತ್ತಿಶೀಲ ನಾಯಕ” ಎಂದು ರಮಣಿ ಅವರೇ ಹೇಳಿದ್ದಾರೆ ಎನ್ನುವ ಅಂಶವನ್ನು ಪ್ರಸ್ತಾಪಿಸುವ ಮೂಲಕ ಅಕ್ಬರ್‌ಗೆ ಘನತೆಯೇ ಇಲ್ಲ ಎಂಬ ಅವರ ವಾದದ ವಿರೋಧಾಭಾಸದತ್ತ ಬೆರಳು ಮಾಡಿದರು. “ಯಾವ ಆಧಾರದಲ್ಲಿ ಅಕ್ಬರ್‌ಗೆ ಘನತೆ ಇಲ್ಲ ಎಂದು ಅವರು ಹೇಳುತ್ತಿದ್ದಾರೆ. ಆ ಪದದಲ್ಲೇ ಎಲ್ಲವೂ ಇದೆ. ಕಳಂಕರಹಿತ ಹೆಸರಿನಿಂದ ಆ ವ್ಯಕ್ತಿಯು ವೃತ್ತಿಶೀಲ ನಾಯಕ ಎನಿಸಿಕೊಂಡಿದ್ದಾರೆ. ಹಲವು ವರ್ಷಗಳು ಶ್ರಮವಹಿಸಿ ದುಡಿದು ಘನತೆ ಕಟ್ಟಿಕೊಂಡಿದ್ದಾರೆ” ಎಂದು ಲೂಥ್ರಾ ವಾದವನ್ನು ವಿಸ್ತರಿಸಿದರು.

ವೋಗ್‌ಗೆ ಬರೆದ ಲೇಖನದ ಒಂದು ಭಾಗ ಮಾತ್ರ ಅಕ್ಬರ್‌ ಕುರಿತಾದದ್ದು ಎಂದು ರಮಣಿ ಹೇಳಿರುವುದು ಆನಂತರದ ಆಲೋಚನೆಯಿಂದ ಬಂದಿರುವಂಥದ್ದು ಎಂದ ಲೂಥ್ರಾ ಅವರು,“ ಆಕೆ (ರಮಣಿ), 'ಪ್ರೀತಿಯ ಪುರುಷ ಮುಖ್ಯಸ್ಥರೇ (ಬಾಸ್)' ಎಂದಿದ್ದಾರೆ. ಇದು ʼಎಕ್ಸ್‌ʼಗೆ ಮತ್ತು ಅದು ʼವೈʼಗೆ ಎಂದು ಅಲ್ಲಿ ಯಾವ ವಿಭಜನೆಯೂ ಇಲ್ಲ.‌ 2018ರಲ್ಲಿ ಆಕೆ ಅವರ ಹೆಸರನ್ನು ಪ್ರಸ್ತಾಪಿಸಿರುವುದರಲ್ಲಿ ನನಗೆ ಯಾವುದೇ ತೆರನಾದ ಒಳಿತು ಅಥವಾ ನಿಷ್ಕಪಟತೆ ಕಾಣುತ್ತಿಲ್ಲ. ನೀವು ಏನನ್ನೋ ಬರೆದು, ಇದು ಅವರಿಗೆ ಸಂಬಂಧಿಸಿದ್ದು, ಇದು ಅವರಿಗೆ ಸಂಬಂಧಿಸಿದ್ದಲ್ಲ ಎಂದು ಹೇಳುವ ಹಾಗಿಲ್ಲ. ಆ ಲೇಖನ ಹಾಗೆ ಓದಲ್ಪಡುವುದಿಲ್ಲ” ಎಂದರು. ಸಾಮಾಜಿಕ ಮಾಧ್ಯಮದಲ್ಲಿ ಆರೋಪ ಮಾಡುವ ಬದಲು ರಮಣಿ ಅವರು ನ್ಯಾಯಾಲಯ ಮುಂದೆ ಬರಬೇಕಿತ್ತು ಎಂದು ಲೂಥ್ರಾ ಒತ್ತಿ ಹೇಳಿದರು.

ಡಿಸೆಂಬರ್‌ 24ಕ್ಕೆ ವಿಚಾರಣೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com