ನಾಗಪುರ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಫಾಹೀಮ್ ಖಾನ್ ಸೇರಿದಂತೆ ಇಬ್ಬರ ಆಸ್ತಿ ತೆರವು ಕಾರ್ಯಾಚರಣೆಯನ್ನು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಸೋಮವಾರ ತಡೆಹಿಡಿದಿದೆ [ಜೆಹ್ರುನಿಸಾ ಖಾನ್ ಮತ್ತು ನಾಗಪುರ ಮುನ್ಸಿಪಲ್ ಕಾರ್ಪೊರೇಷನ್ ನಡುವಣ ಪ್ರಕರಣ].
ಅಧಿಕಾರಿಗಳದ್ದು ದಬ್ಬಾಳಿಕೆಯ ವರ್ತನೆ ಎಂದು ಖಂಡಿಸಿದ ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ವೃಶಾಲಿ ಜೋಶಿ ಅವರಿದ್ದ ಪೀಠ ಸುಪ್ರೀಂ ಕೋರ್ಟ್ 2022ರ ತೀರ್ಪಿಗೆ ವ್ಯತಿರಿಕ್ತವಾಗಿ ತೆರವು ಕಾರ್ಯಾಚರಣೆ ನಡೆದಿದೆ ಎಂದಿತು.
ಆದರೆ ಹೈಕೋರ್ಟ್ ಆದೇಶ ಹೊರಡಿಸುವಷ್ಟರಲ್ಲಿ ನಾಗಪುರ ಪಾಲಿಕೆಯು ಅರ್ಜಿದಾರರಲ್ಲಿ ಒಬ್ಬರಾದ ಫಾಹಿಂ ಖಾನ್ ಅವರಿಗೆ ಸೇರಿದ ಆಸ್ತಿ ನೆಲಸಮಗೊಳಿಸಿತ್ತು. ಆದೇಶ ಪ್ರಕಟವಾಗಿದ್ದರಿಂದಾಗಿ ಮತ್ತೊಬ್ಬ ಆರೋಪಿ ಯೂಸುಫ್ ಶೇಖ್ ಅವರ ಮನೆಯ ಅಕ್ರಮ ಭಾಗ ಕೆಡವುವುದನ್ನು ನಿಲ್ಲಿಸಲಾಯಿತು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 15ರಂದು ನಡೆಯಲಿದೆ.
ಮಹಾರಾಷ್ಟ್ರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿ ತೆರವುಗೊಳಿಸುವಂತೆ ಮಾಡಲಾದ ಆಗ್ರಹದಿಂದಾಗಿ ಮಾರ್ಚ್ 17ರಂದು ನಾಗಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯರು ಕುರಾನ್ ಉಲ್ಲೇಖವಿದ್ದ ವಸ್ತ್ರಗಳನ್ನು ಸುಟ್ಟಿದ್ದಾರೆ ಎಂಬ ವದಂತಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಘಟನೆ ಹಿನ್ನೆಲೆಯಲ್ಲಿ ಬಂಧಿತರಾದ 100ಕ್ಕೂ ಹೆಚ್ಚು ಜನರಲ್ಲಿ ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ ನಾಯಕ ಫಾಹಿಂ ಖಾನ್, ತಮ್ಮ ಆಸ್ತಿಯು ಧ್ವಂಸಗೊಳ್ಳುವ ಆತಂಕದಿಂದ ತುರ್ತು ಪರಿಹಾರ ಕೋರಿ ಮತ್ತೊಬ್ಬ ಆರೋಪಿ ಶೇಖ್ ಅವರೊಡಗೂಡಿ ತಮ್ಮ ತಾಯಿ ಜೆಹ್ರುನ್ನಿಸಾ ಮೂಲಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕಟ್ಟಡವನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು ಅನೋಮದನೆ ಪಡೆಯದೆ ಇರುವುದರಿಂದ ಮಾರ್ಚ್ 21ರಂದು ನಾಗಪುರ ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿದ್ದ ಕ್ರಮವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.