ಗುರುವಾರ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ ನಂತರ ನೈನಿತಾಲ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ಉತ್ತರಾಖಂಡ ಹೈಕೋರ್ಟ್ ಶುಕ್ರವಾರ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ [ಹುಸಾನ್ ಬೇಗಂ ಮತ್ತು ಉತ್ತರಾಖಂಡ ಸರ್ಕಾರ ನಡುವಣ ಪ್ರಕರಣ].
ಆರೋಪಿಯ ಮನೆ ಕೆಡವಲು ನೋಟಿಸ್ ಜಾರಿ ಮಾಡಿದ ಸ್ಥಳೀಯ ಪುರಸಭೆಯ ಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ರವೀಂದ್ರ ಮೈಥಾನಿ ಅವರಿದ್ದ ಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಪುರಸಭೆಯವರು ತನ್ನ ಮನೆ ಕೆಡವಲು ನೀಡಿದ ನೋಟಿಸ್ ಪ್ರಶ್ನಿಸಿ ಆರೋಪಿಯ ಪತ್ನಿ ಅರ್ಜಿ ಸಲ್ಲಿಸಿದ್ದರು. ಕುಟುಂಬ 20 ವರ್ಷಗಳಿಗೂ ಹೆಚ್ಚು ಕಾಲ ಮನೆಯಲ್ಲಿ ವಾಸಿಸುತ್ತಿದ್ದು, ಈ ಮೊದಲು ತಮಗೆ ಅತಿಕ್ರಮಣದ ಯಾವುದೇ ನೋಟಿಸ್ ಕಳುಹಿಸಿಲ್ಲ ಎಂದು ಆಕೆ ಅಳಲು ತೋಡಿಕೊಂಡಿದ್ದರು.
ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಅಕ್ರಮವಾಗಿ ಕೆಡವುವುದನ್ನು ತಡೆಯಲು ಸುಪ್ರೀಂ ಕೋರ್ಟ್ ಹೊರಡಿಸಿದ ನಿರ್ದೇಶನಗಳನ್ನು ಸ್ಥಳೀಯ ಸಂಸ್ಥೆಯ ಈ ನಡೆ ಉಲ್ಲಂಘಿಸಿದೆ ಎಂದು ನ್ಯಾಯಾಲಯ ಹೇಳಿದೆ.
ಗುರುವಾರ ನೈನಿತಾಲ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ವೈಫಲ್ಯವನ್ನು ಪ್ರಶ್ನಿಸಿತು.
" ನಾವು ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗುತ್ತೇವೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಆದೇಶವನ್ನು ಬಹಳ ಹಿಂದೆಯೇನೂ ನೀಡಿಲ್ಲ ... ಮನೆ ಕೆಡವಲು ಬಯಸಿದರೆ, ಕಾರ್ಯವಿಧಾನ ಹೇಗಿರಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ " ಎಂದು ನ್ಯಾಯಾಲಯ ತಿಳಿಸಿತು.
ಗುರುವಾರ ನೈನಿತಾಲ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ವೈಫಲ್ಯವನ್ನು ಪ್ರಶ್ನಿಸಿತು.
"ನಿಮ್ಮ ಅಸಮರ್ಥತೆಯೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ.̤ ನೀವು ಅದನ್ನು ಮುಚ್ಚಿಡಲು ಬಯಸುತ್ತಿದ್ದೀರಿ. ಎಲ್ಲರಿಗೂ ಸೇರಿದ ಅಂಗಡಿಗಳಿರುವಾರ ಬಿಮ್ಲಾ ದೇವಿ ಎನ್ನುವವರ ಅಂಗಡಿಯನ್ನು ಏಕೆ ದೋಚಲಾಯಿತು " ಎಂದು ನ್ಯಾಯಾಲಯ ಕೇಳಿತು.
ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ಆತನ ಪರ ವಕೀಲರೊಂದಿಗೆ ಜಗಳ ಆಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಆಗ ಪೀಠವು “ಯಾರನ್ನಾದರೂ ಪ್ರತಿನಿಧಿಸುವುದನ್ನು ವಕೀಲರು ಹೇಗೆ ತಡೆಯಲು ಸಾಧ್ಯ?” ಎಂದು ಪ್ರಶ್ನಿಸಿತು.
ವಿಚಾರಣೆಯ ವೇಳೆ, ಪುರಸಭೆಯನ್ನು ಪ್ರತಿನಿಧಿಸುವ ವಕೀಲರು ನೋಟಿಸ್ ಹಿಂಪಡೆಯುವುದಾಗಿ ಹೇಳಿದರು. ಪ್ರಕರಣದ ಮುಂದಿನ ವಿಚಾರಣೆ ಮೇ 6ರಂದು ನಡೆಯಲಿದೆ.