ಶರಬತ್ ಜಿಹಾದ್ ಹೇಳಿಕೆ: ಕೋಮು ನಿಂದನೆ ಮಾಡದಂತೆ ಬಾಬಾ ರಾಮದೇವ್‌ಗೆ ದೆಹಲಿ ಹೈಕೋರ್ಟ್ ಆದೇಶ

ತಮ್ಮ ಕಂಪನಿಯ ಉತ್ಪನ್ನವಾದ ಗುಲಾಬ್ ಶರಬತ್ ಪ್ರಚಾರ ಮಾಡುವಾಗ ರಾಮದೇವ್ ಏಪ್ರಿಲ್ 3ರಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
Baba Ramdev, Rooh Afza
Baba Ramdev, Rooh Afza
Published on

ಪತಂಜಲಿ ಕಂಪೆನಿ ಸಂಸ್ಥಾಪಕ ಬಾಬಾ ರಾಮದೇವ್ ಅವರು ಪ್ರತಿಸ್ಪರ್ಧಿ ಕಂಪನಿಗಳನ್ನು ಗುರಿಯಾಗಿಸಿಕೊಂಡು ಯಾವುದೇ ಹೇಳಿಕೆ, ಸಾಮಾಜಿಕ ಮಾಧ್ಯಮ ಪ್ರಕಟಣೆ ಅಥವಾ ಕೋಮು ನಿಂದನೆ ಒಳಗೊಂಡಿರುವ ಅವಹೇಳನಕಾರಿ ವಿಡಿಯೋ ಅಥವಾ ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ [ಹಮ್‌ದರ್ದ್ ನ್ಯಾಷನಲ್ ಫೌಂಡೇಶನ್ ಇಂಡಿಯಾ ಮತ್ತು ಪತಂಜಲಿ ಫುಡ್ಸ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ] .

ತಮ್ಮ ಜನಪ್ರಿಯ ಪಾನೀಯ 'ರೂಹ್ ಅಫ್ಜಾ'ವನ್ನು ಗುರಿಯಾಗಿಸಿಕೊಂಡು ಕೋಮು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಔಷಧ ಮತ್ತು ಆಹಾರ ಕಂಪನಿ ಹಮ್ ದರ್ದ್ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ಏಪ್ರಿಲ್ 22ರಂದು ನೀಡಿದ್ದ ನಿರ್ದೇಶನ ಪುನರುಚ್ಚರಿಸಿದರು.

ಅಂತೆಯೇ, ರಾಮದೇವ್ ಪರ ವಾದ ಮಂಡಿಸಿದ ವಕೀಲ ಹಿರಿಯ ವಕೀಲ ರಾಜೀವ್ ನಾಯರ್ ಅವರು ಅಫಿಡವಿಟ್‌ಗಳನ್ನು ಸಲ್ಲಿಸಲಾಗುವುದು ಎಂದರು.

Also Read
'ಶರಬತ್ ಜಿಹಾದ್' ವಿವಾದ: ವಿಡಿಯೋ ತೆಗೆದುಹಾಕುವುದಾಗಿ ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಬಾಬಾ ರಾಮದೇವ್‌

ಇದನ್ನು ಗಮನಿಸಿದ ನ್ಯಾಯಾಲಯ ಶುಕ್ರವಾರವೇ ಅರ್ಜಿ ಸಲ್ಲಿಸುವಂತೆ ಸೂಚಿಸಿತು.

Also Read
'ಶರಬತ್ ಜಿಹಾದ್' ಹೇಳಿಕೆ ಆಘಾತಕಾರಿ: ಬಾಬಾ ರಾಮದೇವ್ ವಿರುದ್ಧ ದೆಹಲಿ ಹೈಕೋರ್ಟ್ ಅಸಮಾಧಾನ

ಹಮ್ ದರ್ದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ರಾಮದೇವ್ ಅವರು ಯೂಟ್ಯೂಬ್‌ನಲ್ಲಿ ವಿವಾದಾತ್ಮಕ ವಿಡಿಯೋದ ಗೋಚರತೆಯನ್ನು 'ಖಾಸಗಿ' ಎಂದು ಬದಲಾಯಿಸಿರುವುದರಿಂದ, ಅವರ ಚಾನೆಲ್‌ನ ಚಂದಾದಾರರು ವಿಡಿಯೋವನ್ನು ಈಗಲೂ ವೀಕ್ಷಿಸಬಹುದಾಗಿದೆ ಎಂದು ಗಮನಸೆಳೆದರು.

"ನಾವು ಅದನ್ನು ತೆಗೆದುಹಾಕುತ್ತೇವೆ, ನಮಗೆ 24 ಗಂಟೆಗಳ ಕಾಲಾವಕಾಶ ಇದೆ. ನ್ಯಾಯಾಲಯದ ಆದೇಶಗಳನ್ನು ನಾವು ಪಾಲಿಸುತ್ತೇವೆ" ಎಂದು ಪತಂಜಲಿ ಮತ್ತು ರಾಮದೇವ್ ಪರವಾಗಿ ಹಿರಿಯ ವಕೀಲ ರಾಜೀವ್ ನಾಯರ್ ಹೇಳಿದರು.

ಹಿಂದಿನ ಆದೇಶಕ್ಕೆ ಅನುಗುಣವಾಗಿ ಅಫಿಡವಿಟ್‌ಗಳನ್ನು ಸಲ್ಲಿಸಲಾಗುವುದು ಎಂದ ಅವರು ಪ್ರಕರಣ ಮುಕ್ತಾಯಗೊಳಿಸಿ ಮೊಕದ್ದಮೆ ವಿಲೇವಾರಿ ಮಾಡುವಂತೆ ಪ್ರಾರ್ಥಿಸಿದರು. ನಂತರ ನ್ಯಾಯಾಲಯವು ಇದೇ ದಿನದೊಳಗೆ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತು.

ತಾನು ನೀಡಿರುವ ಆದೇಶ ಪಾಲನೆಯಾಗಿದೆಯೇ ಎಂಬ ಕುರಿತು ಮೇ 9ರಂದು ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಹಮ್ ದರ್ದ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ, ಸಂದೀಪ್‌ ಸೇಥಿ ಹಾಗೂ ಸಹ ವಕೀಲರು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com