Nambi Narayanan and Supreme Court
Nambi Narayanan and Supreme Court 
ಸುದ್ದಿಗಳು

ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಪ್ರಕರಣ: ಡಿ ಕೆ ಜೈನ್ ಸಮಿತಿ ವಿಸರ್ಜಿಸಿದ ಸುಪ್ರೀಂಕೋರ್ಟ್

Bar & Bench

ಇಸ್ರೋ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜ್ಞಾನಿ ನಂಬಿ ನಾರಾಯಣನ್ ವಿರುದ್ಧ ಕೇರಳದ ಮಾಜಿ ಪೊಲೀಸ್ ಅಧಿಕಾರಿಗಳು ಎಸಗಿದ ತಪ್ಪುಗಳ ಕುರಿತು ತನಿಖೆ ನಡೆಸಲು ರೂಪಿಸಲಾಗಿದ್ದ ಡಿಕೆ ಜೈನ್ ಸಮಿತಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಸರ್ಜಿಸಿದೆ.

ತಪ್ಪೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದ ನಂತರ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಪೀಠ ಸಮಿತಿಯನ್ನು ವಿಸರ್ಜಿಸಲು ಮುಂದಾಯಿತು.

ಎಫ್‌ಐಆರ್ ದಾಖಲಿಸಲಾಗಿದ್ದು ಅದರ ಪ್ರತಿಯನ್ನು ಇಂದು (ಸೋಮವಾರ) ಅಪ್‌ಲೋಡ್ ಮಾಡಲಾಗುವುದು ಎಂದು ಸಿಬಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

"ಈಗ ಸಿಬಿಐ ಈ ವಿಷಯದಲ್ಲಿ ಮುಂದುವರಿಯಲು ನಿರ್ಧರಿಸಿದ್ದು ಎಫ್ಐಆರ್ ದಾಖಲಾದ ನಂತರದ ಮುಂದಿನ ಕ್ರಮಗಳು ಕಾನೂನಿನ ಪ್ರಕಾರ ನಡೆಯಲಿವೆ. ಹೆಚ್ಚಿನ ನಿರ್ದೇಶನ ಅಗತ್ಯವಿಲ್ಲ. ವರದಿಯನ್ನು ಅಂತಿಮವಾಗಿ ಕಾರ್ಯಗತಗೊಳಿಸಲಾಗಿರುವುದರಿಂದ, ನ್ಯಾಯಮೂರ್ತಿ ಡಿ ಕೆ ಜೈನ್‌ ನೇತೃತ್ವದ ಸಮಿತಿಯನ್ನು ವಿಸರ್ಜಿಸಬೇಕು ಎಂಬ ಎಎಸ್‌ಜಿ ಅವರ ಕೋರಿಕೆಯನ್ನು ನಾವು ಸ್ವೀಕರಿಸುತ್ತೇವೆ. ಅಧ್ಯಕ್ಷರು ಸೇರಿದಂತೆ ಸಮಿತಿ ಮಾಡಿದ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ. ಸಮಿತಿಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ" ಎಂದು ನ್ಯಾಯಾಲಯ ಆದೇಶಿಸಿತು.

ಮುಖ್ಯವಾಗಿ, ಸಿಬಿಐ ಸ್ವತಂತ್ರವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಬೇಕು ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿ ಕೆ ಜೈನ್ ವರದಿಯೊಂದೇ ಆಧಾರವಾಗಿರಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

"ಕಾನೂನಿನ ಯಾವುದೇ ನಿಬಂಧನೆಗಳ ಅಡಿಯಲ್ಲಿ ಸಹಾಯ ಪಡೆಯಬಹುದು ಎಂದು ಪ್ರತಿವಾದಿಗಳ ಗಮನಕ್ಕೆ ತರಬೇಕಾದ ಅಗತ್ಯವಿಲ್ಲ. ಎಫ್ಐಆರ್ ದಾಖಲಿಸಿದ ನಂತರ ತನಿಖಾ ಸಂಸ್ಥೆ ಖುದ್ದಾಗಿ ಸಾಕ್ಷ್ಯ ಸಂಗ್ರಹಿಸಬೇಕಿದ್ದು ನ್ಯಾ. ಡಿ ಕೆ ಜೈನ್‌ ವರದಿಯನ್ನು ಅದು ಅವಲಂಬಿಸಬಾರದು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಡಿಕೆ ಜೈನ್ ವರದಿ ಆಧಾರವಾಗಿರಬಾರದು. ಎರಡೂ ಕಡೆಯ ವಾದಗಳು ಮುಕ್ತವಾಗಿರಬೇಕು ಎಂದು ನ್ಯಾಯಾಲಯ ತಿಳಿಸಿತು.

ಇಸ್ರೋದ ವಿಜ್ಞಾನಿಯಾದ ನಂಬಿ ನಾರಾಯಣನ್‌ ಅವರು ಕ್ರಯೋಜೆನಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ವಿರುದ್ಧ 1994ರಲ್ಲಿ, ರಕ್ಷಣಾ ರಹಸ್ಯಗಳನ್ನು ಶತ್ರು ದೇಶಗಳಿಗೆ ಸೋರಿಕೆ ಮಾಡಿದ ಸುಳ್ಳು ಆರೋಪ ಹೊರಿಸಲಾಯಿತು. ಅಧಿಕೃತ ರಹಸ್ಯ ಕಾಯಿದೆಯಡಿ ಕೇರಳ ಪೊಲೀಸರು ವಿಜ್ಞಾನಿಯನ್ನು ಬಂಧಿಸಿದ್ದರು.

1998ರಲ್ಲಿ ಎಲ್ಲಾ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಲಾಗಿತ್ತು. ತನ್ನ ವಿರುದ್ಧ ಸುಳ್ಳು ಪ್ರಕರಣ ಹೆಣೆದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿ ಅವರು ದಾವೆ ಹೂಡಿದ್ದರು. ತನ್ನಿಂದ ಹೇಳಿಕೆ ಪಡೆಯುವುದಕ್ಕಾಗಿ ಕೇರಳ ಪೊಲೀಸ್‌ ಮತ್ತು ಗುಪ್ತಚರ ದಳ ತನ್ನನ್ನು ಹಿಂಸಿಸಿತ್ತು ಎಂದು ಅವರು ಆರೋಪಿಸಿದ್ದರು. ತನಗೆ ಉಂಟಾದ ಚಿತ್ರಹಿಂಸೆ ಮತ್ತು ಸಂಕಟಗಳಿಗೆ ಪರಿಹಾರ ನೀಡಬೇಕೆಂದು ಕೋರಿ ಅವರು ಈ ಮೊದಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (ಎನ್‌ಎಚ್‌ಆರ್‌ಸಿ) ಸಂಪರ್ಕಿಸಿದ್ದರು. ಮಧ್ಯಂತರ ಪರಿಹಾರವಾಗಿ ರೂ.10 ಲಕ್ಷ ಹಣವನ್ನು ನಂಬಿ ನಾರಾಯಣನ್‌ ಅವರಿಗೆ ನೀಡುವಂತೆ ಎನ್‌ಎಚ್‌ಆರ್‌ಸಿ ಸೂಚಿಸಿತ್ತು.

ತಪ್ಪೆಸಗಿದ ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ನಂಬಿ ಅವರು ಕೇರಳ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನ ಏಕಸದಸ್ಯ ಪೀಠ ಅವರ ಮನವಿಯನ್ನು ಪುರಸ್ಕರಿಸಿತಾದರೂ ವಿಭಾಗೀಯ ಪೀಠ ಅದನ್ನು ಒಪ್ಪದೇ ಇದ್ದುದರಿಂದ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದರು.

ನಂಬಿ ಅವರ ವಿರುದ್ಧ ಕ್ರಮ ಜರುಗಿಸಿದ್ದು ದುರುದ್ದೇಶಪೂರ್ವಕ ಮತ್ತು ಅವರಿಗೆ ಅಪಾರ ಕಿರುಕುಳ ನೀಡಲಾಗಿದೆ ಎಂದು 2018 ರ ಸೆಪ್ಟೆಂಬರ್‌ನಲ್ಲಿ ಅಭಿಪ್ರಾಯಪಟ್ಟ ನ್ಯಾಯಾಲಯ ಅವರಿಗೆ ರೂ.50 ಲಕ್ಷ ಪರಿಹಾರ ನೀಡುವಂತೆ ಸೂಚಿಸಿತಲ್ಲದೆ ತಪ್ಪೆಸಗಿದ ಪೊಲೀಸರ ವಿರುದ್ಧ ಕ್ರ,ಮ ಕೈಗೊಳ್ಳಬೇಕೆ ಎಂಬ ಕುರಿತು ಡಿ ಕೆ ಜೈನ್‌ ನೇತೃತ್ವದ ಸಮಿತಿ ರಚಿಸಿತ್ತು. ವಿಚಾರಣೆ ಪೂರ್ಣಗೊಳಿಸಿದ್ದ ಸಮಿತಿ ಮೊಹರು ಹಾಕಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ನೀಡಿತ್ತು.

ನ್ಯಾ. ಜೈನ್‌ ಅವರ ವರದಿ ಸ್ವೀಕರಿಸುವಂತೆ ಮತ್ತು ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ತನ್ನನ್ನೂ ಪಕ್ಷಕಾರನನ್ನಾಗಿ ಮಾಡುವಂತೆ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ನಂತರ ನ್ಯಾಯಾಲಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದೇಶಿಸಿತ್ತು.