TMC leaders 
ಸುದ್ದಿಗಳು

ನಾರದ ಪ್ರಕರಣ: ಟಿಎಂಸಿ ನಾಯಕರ ಗೃಹಬಂಧನ ಪ್ರಶ್ನಿಸಿದ್ದ ಸಿಬಿಐ ಮನವಿ ತಿರಸ್ಕರಿಸಿದ ಕಲ್ಕತ್ತಾ ಹೈಕೋರ್ಟ್‌

ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾ. ಅರಿಜಿತ್ ಬ್ಯಾನರ್ಜಿ ಅವರಿದ್ದ ಪೀಠವು ಶುಕ್ರವಾರ ಮಧ್ಯಾಹ್ನ ನಡೆಸಿದ ವಿಚಾರಣೆ ವೇಳೆ ಅರ್ಜಿಯನ್ನು ತಿರಸ್ಕರಿಸಿತು.

Bar & Bench

ನಾರದಾ ಪ್ರಕರಣದಲ್ಲಿ ನಾಲ್ವರು ಟಿಎಂಸಿ ನಾಯಕರಿಗೆ ಗೃಹಬಂಧನ ವಿಧಿಸುವ ವಿಚಾರ ಹಾಗೂ ಪ್ರಕರಣದ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್‌ ತಿರಸ್ಕರಿಸಿದೆ.

ನಾರದ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ನಾಲ್ವರು ನಾಯಕರ ಬಂಧನ ಪ್ರಕರಣದ ವಿಚಾರಣೆಯನ್ನು ವಿಸ್ತೃತ ಪೀಠ ವಿಚಾರಣೆ ನಡೆಸಲಿದೆ ಎಂದು ಕಲ್ಕತ್ತಾ ಹೈಕೋರ್ಟ್‌ ಶುಕ್ರವಾರ ಬೆಳಿಗ್ಗೆ ತಿಳಿಸಿತ್ತು. ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಮತ್ತು ಅರಿಜಿತ್‌ ಬ್ಯಾನರ್ಜಿ ಅವರಿದ್ದ ಪೀಠ ಮಧ್ಯಂತರ ಜಾಮೀನು ಮಂಜೂರು ವಿಚಾರದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಲು ಆದೇಶಿಸಿತ್ತು. ಮುಖ್ಯ ನ್ಯಾಯಮೂರ್ತಿಗಳು ಜಾಮೀನು ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ನ್ಯಾ. ಬ್ಯಾನರ್ಜಿ ಅದನ್ನು ವಿರೋಧಿಸಿದ್ದರು. ಆದರೆ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಹಾಗೂ ನಾಲ್ವರು ನಾಯಕರನ್ನು ಗೃಹ ಬಂಧನದಲ್ಲಿರಿಸುವ ವಿಚಾರಕ್ಕೆ ಸಿಬಿಐ ತಕರಾರು ತೆಗೆದಿತ್ತು.

ಕೋವಿಡ್‌ ವ್ಯಾಪಿಸಿರುವುದರಿಂದ ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಗೌತಮ್ ನವಲಾಖಾ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸುವ ಬದಲು ಗೃಹಬಂಧನದಲ್ಲಿರಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಆ ಪ್ರಕರಣವನ್ನು ಆಧರಿಸಿ ಟಿಎಂಸಿ ನಾಯಕರನ್ನು ಕೂಡ ಜೈಲಿನ ಬದಲು ಗೃಹಬಂಧನದಲ್ಲಿ ಇರಿಸಬೇಕೆಂದು ನ್ಯಾಯಾಲಯ ಶುಕ್ರವಾರ ಬೆಳಿಗ್ಗೆ ಆದೇಶಿಸಿತ್ತು.

ಆದೇಶ ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಸಂಪುಟ ದರ್ಜೆ ಸಚಿವರಾದ ಫಿರ್ಹಾದ್ ಹಕೀಮ್ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಮುಂದುವರೆಸಬಹುದಾಗಿದ್ದು ಇದಕ್ಕೆ ನ್ಯಾಯಾಲಯ ತಡೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ನಾರದ ಕುಟುಕು ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರ ಮತ್ತು ಸೋವನ್ ಚಟರ್ಜಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಅಂದು ರಾತ್ರಿ ನಡೆದ ವಿಚಾರಣೆ ಬಳಿಕ ಈ ನಾಲ್ವರಿಗೆ ಜಾಮೀನು ನೀಡಲು ಹೈಕೋರ್ಟ್‌ ನಿರಾಕರಿಸಿತ್ತು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತಿತರರು ಸಿಬಿಐ ಕಚೇರಿಯ ಹೊರಗೆ ಧರಣಿ ಕುಳಿತು ತನಿಖಾ ಸಂಸ್ಥೆಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸಿಬಿಐ ನ್ಯಾಯಾಲಯದಿಂದ ಪ್ರಕರಣವನ್ನು ವರ್ಗಾವಣೆ ಮಾಡುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ ಹೈಕೋರ್ಟ್‌ ನಾಲ್ವರಿಗೆ ಜಾಮೀನು ನೀಡಲು ಒಪ್ಪಿರಲಿಲ್ಲ.